ಬೆಂಗಳೂರು:ಇನ್ನೆರಡು ದಿನಗಳಲ್ಲಿ ಚಂದ್ರನ ಮೇಲೆ ಲ್ಯಾಂಡ್ ಆಗಲು ಸಿದ್ಧವಾಗಿರುವ ಚಂದ್ರಯಾನ-3 ನೌಕೆ ಭವ್ಯ ಯಶಸ್ಸು ಸಾಧಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಮುಖ್ಯಸ್ಥ ಮತ್ತು ಚಂದ್ರಯಾನ-2 ಯೋಜನೆಯ ಮುಂದಾಳುವಾಗಿದ್ದ ಕೆ.ಶಿವನ್ ಅವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದರು.
ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಮತ್ತು ಅದರಲ್ಲಿನ ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಶಿವನ್ ಮಾಧ್ಯಮವೊಂದರಲ್ಲಿ ಮಾತನಾಡಿ, ಇದು ಕುತೂಹಲ ಮತ್ತು ತಳಮಳ ಉಂಟು ಮಾಡುವ ಸಮಯ. ನಮ್ಮ ವಿಜ್ಞಾನಿಗಳ ಶ್ರಮಕ್ಕೆ ಮಂಗಳವಾರ ಸಂಜೆ ಪ್ರತಿಫಲ ಸಿಗಲಿದೆ ಎಂದು ಹೇಳಿದರು.
ಯೋಜನೆ ದೊಡ್ಡ ಯಶಸ್ಸು ಪಡೆಯುತ್ತದೆ ಎಂಬ ಖಾತ್ರಿ ನನಗಿದೆ. ನಮ್ಮದೇ ಆದ ಸುಭದ್ರ ವ್ಯವಸ್ಥೆಯನ್ನು ಹೊಂದಿದ್ದೇವೆ. ಯಾವುದೇ ಸಮಸ್ಯೆಯಿಲ್ಲದೆ ಲ್ಯಾಂಡರ್ ಚಂದ್ರನ ಮೇಲಿಳಿಯಲಿದೆ. ಆದರೂ ಇದೊಂದು ತೀರಾ ಕಷ್ಟದ, ಸಂಕೀರ್ಣ ಪ್ರಕ್ರಿಯೆ ಎಂದು ವಿವರಿಸಿದರು.
ರಷ್ಯಾದ ಲೂನಾ -25 ನೌಕೆ ಚಂದ್ರನ ಮೇಲೆ ಪತನವಾದ ಕುರಿತು ಪ್ರತಿಕ್ರಿಯಿಸಿ, ರಷ್ಯಾದ ಬಾಹ್ಯಾಕಾಶ ನೌಕೆಯು ನಿಯಂತ್ರಣ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿದೆ. ಇದಕ್ಕೂ ಮೊದಲು 2019 ರಲ್ಲಿ ನಾವೇ ರೂಪಿಸಿದ ಚಂದ್ರಯಾನ-2 ನೌಕೆಯೂ ಇದೇ ರೀತಿ ಪತನ ಕಂಡಿತ್ತು. ಹೀಗಾಗಿ ಚಂದ್ರನ ಅಧ್ಯಯನದ ನೌಕೆಗಳಲ್ಲಿ ಅನೇಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ವಿಷಯಗಳನ್ನು ಬದಲಾಯಿಸಬೇಕಾಗಿದೆ ಎಂದು ಇಸ್ರೋ ಮಾಜಿ ಮುಖ್ಯಸ್ಥರು ಅಭಿಪ್ರಾಯಪಟ್ಟರು.
ಸ್ವದೇಶಿ ತಂತ್ರಜ್ಞಾನ: ಚಂದ್ರಯಾನ-2 ಯೋಜನೆಯ ವೈಫಲ್ಯದ ಆಧಾರದ ಮೇಲೆ ಚಂದ್ರಯಾನ-3 ಉಪಗ್ರಹ ರೂಪಿಸಲಾಗಿದೆ. ಎಲ್ಲವನ್ನೂ ನಮ್ಮ ವಿಜ್ಞಾನಿಗಳೇ ಸ್ಥಳೀಯವಾಗಿ ರೂಪಿಸಿದ್ದಾರೆ. ಎಲ್ಲ ತಂತ್ರಜ್ಞಾನ ನಮ್ಮದೇ ಮಣ್ಣಿನ ಸೊಗಡು. ಹೀಗಾಗಿ ಉಪಗ್ರಹ ಚಂದ್ರನ ಮೇಲೆ ಇಳಿಯೋದು ಪಕ್ಕಾ ಎಂದು ಬಲವಾದ ವಿಶ್ವಾಸದ ಮಾತುಗಳನ್ನಾಡಿದರು.
ಚಂದ್ರನ ಚಿತ್ರ ಕಳುಹಿಸಿದ ಉಪಗ್ರಹ:ಚಂದ್ರಯಾನ-3 ಆಗಸ್ಟ್ 23 ರಂದು ಸಂಜೆ 6.04 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯಲಿದ್ದು, ಅದಕ್ಕೂ ಮೊದಲು ಡೀಬೂಸ್ಟಿಂಗ್ ಮೂಲಕ ಶಶಿಯ ಹತ್ತಿರಕ್ಕೆ ಇಳಿಸಲಾಗಿರುವ ನೌಕೆಯು ಕೆಲ ಚಿತ್ರಗಳನ್ನು ಕ್ಲಿಕ್ಕಿಸಿ ರವಾನಿಸಿದೆ. ಚಿತ್ರಗಳಲ್ಲಿ ಚಂದ್ರನ ಮೇಲ್ಮೈ ಪ್ರದೇಶವನ್ನು ಕಾಣಬಹುದು. ದೊಡ್ಡ ಕುಳಿಗಳು ಅದರಲ್ಲಿ ಗೋಚರವಾಗಿವೆ. ಲ್ಯಾಂಡರ್ ಇಳಿಕೆಯ ಸಾಹಸವನ್ನು ಇಸ್ರೋ ವೆಬ್‌ಸೈಟ್, ಅದರ ಯೂಟ್ಯೂಬ್ ಚಾನಲ್, ಫೇಸ್ಬುಕ್ ಮತ್ತು ಡಿಡಿ ನ್ಯಾಷನಲ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ:Chandrayaan 3: ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲು ಬಾಹ್ಯಾಕಾಶ ಸಂಸ್ಥೆಯಿಂದ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ