ವಾಶಿಂಗ್ಟನ್ (ಅಮೆರಿಕ) :ಬಳಕೆದಾರರನ್ನು ವಂಚಿಸುವ ಉದ್ದೇಶದಿಂದ ಅಪ್ಲೋಡ್ ಮಾಡಲಾಗಿದ್ದ 10 ಕ್ಕೂ ನಕಲಿ ಚಾಟ್ ಜಿಪಿಟಿ ಆ್ಯಪ್ಗಳ ಲಿಂಕ್ಗಳನ್ನು ಫೇಸ್ ಬುಕ್ ಬ್ಲಾಕ್ ಮಾಡಿದೆ. ಜನರನ್ನು ವಂಚಿಸಿ, ಅವರು ತಮ್ಮ ಕಂಪ್ಯೂಟರ್ಗೆ ಹಾನಿಕಾರಕ ಸಾಫ್ಟವೇರ್ ಮತ್ತು ಬ್ರೌಸರ್ ಆ್ಯಡ್ ಆನ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ನಕಲಿ ಆ್ಯಪ್ಗಳ ಲಿಂಕ್ಗಳನ್ನು ಫೇಸ್ಬುಕ್ನಲ್ಲಿ ಹಾಕಲಾಗಿತ್ತು. ಚಾಟ್ ಜಿಪಿಟಿಯ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕ್ರಿಮಿನಲ್ಗಳು ಸೈಬರ್ ದಾಳಿಗಳನ್ನು ನಡೆಸುವ ಮೂಲಕ ಇಡೀ ಇಂಟರ್ನೆಟ್ನಲ್ಲಿ ಅಕೌಂಟ್ಗಳನ್ನು ಹ್ಯಾಕ್ ಮಾಡುವ ದುಷ್ಕೃತ್ಯದಲ್ಲಿ ತೊಡಗಿದ್ದರು.
ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿರುವ ಮೆಟಾ ತನ್ನ ಪ್ಲಾಟ್ಫಾರ್ಮ್ನಲ್ಲಿ ಶೇರ್ ಮಾಡಲಾಗಿದ್ದ 1,000 ವಿವಿಧ ದುರುದ್ದೇಶಪೂರಿತ URL ಗಳನ್ನು ತೆಗೆದು ಹಾಕಿದೆ. ಇಂಥ ಯುಆರ್ಎಲ್ ಗಳ ಬಗ್ಗೆ ಇತರ ಫೈಲ್ ಶೇರಿಂಗ್ ಪ್ಲಾಟ್ಫಾರ್ಮ್ಗಳಿಗೆ ಕೂಡ ಫೇಸ್ ಬುಕ್ ಮಾಹಿತಿ ನೀಡಿದೆ. ಆನ್ಲೈನ್ ಫ್ರಾಡ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್ ಈಗ ಮೊದಲಿಗಿಂತಲೂ ಹೆಚ್ಚು ಅಪಾಯಕಾರಿಯಾಗುತ್ತಿದೆ. ಹೀಗಾಗಿ ಮೆಟಾ ದಂಥ ಬೃಹತ್ ಸೋಶಿಯಲ್ ಮೀಡಿಯಾ ಕಂಪನಿಗಳು ಸಹ ಇಂಥ ಅಪಾಯಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತಿವೆ. ಚಾಟ್ ಜಿಪಿಟಿ ವಿಚಾರದಲ್ಲಿ ಬಳಕೆದಾರರು ಈಗ ಮೊದಲಿಗಿಂತ ಹೆಚ್ಚು ಜಾಗರೂಕರಾಗಿರಬೇಕಿದೆ. ವಿಶ್ವಾಸಾರ್ಹ ವೆಬ್ಸೈಟ್ಗಳಿಂದ ಮಾತ್ರ ಚಾಟ್ ಜಿಪಿಟಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾದ ಚಾಟ್‌ಜಿಪಿಟಿ, ಮಾನವನ ಪ್ರತಿಕ್ರಿಯೆಗಳನ್ನು ಹೋಲುವ ಪ್ರತಿಕ್ರಿಯೆಗಳನ್ನು ಉತ್ಪಾದಿಸುವ ಪ್ರಭಾವಶಾಲಿ ಸಾಮರ್ಥ್ಯದಿಂದಾಗಿ ತ್ವರಿತವಾಗಿ ಅತ್ಯಂತ ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಇಷ್ಟೊಂದು ಜನಪ್ರಿಯತೆ ಗಳಿಸುವ ಯಾವುದೇ ವಿಷಯದಲ್ಲಿ ಅದರ ದುರ್ಲಾಭ ಪಡೆಯಲು ಕೆಲವರು ಮುಂದಾಗುವುದು ಸಹಜ. ಇದರ ಪರಿಣಾಮವಾಗಿ, ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಲ್ಲಿ ಹಲವಾರು ನಕಲಿ ಚಾಟ್‌ಜಿಪಿಟಿ ಅಪ್ಲಿಕೇಶನ್‌ಗಳು ಹೊರಹೊಮ್ಮಿವೆ. ಉಚಿತ ಎಂದು ಹೇಳಿಕೊಳ್ಳುವ ಈ ಆ್ಯಪ್ಗಳು ಜನರನ್ನು ವಂಚಿಸುತ್ತಿವೆ.