ಹೈದರಾಬಾದ್: 2023ರ ವರ್ಷವು ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಸೆಪ್ಟೆಂಬರ್ 7, 2019ರಂದು ಚಂದ್ರಯಾನ -2 ಕಾರ್ಯಾಚರಣೆಯ ವೈಫಲ್ಯದ ನಂತರ, ಮುಂದಿನ ನಾಲ್ಕೇ ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ 23, 2023 ರಂದು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿತು. ಅಂದು ಮಾತನಾಡಿದ್ದ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್, "ನಾವು ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ್ದೇವೆ. ಈಗ ಭಾರತ ಚಂದ್ರನ ಮೇಲಿದೆ" ಎಂದು ಹೆಮ್ಮೆಯಿಂದ ಹೇಳಿದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ರಾಷ್ಟ್ರ ಮತ್ತು ಒಟ್ಟಾರೆ ಚಂದ್ರನ ಮೇಲಿಳಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಯುನೈಟೆಡ್ ಸ್ಟೇಟ್ಸ್, ಸೋವಿಯತ್ ಒಕ್ಕೂಟ ಮತ್ತು ಚೀನಾ ನಂತರ ಭಾರತದ ಸಾಧನೆ ಅಪ್ರತಿಮವಾದುದು. ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ -3 ಮಿಷನ್ ಅನ್ನು ಜುಲೈ 14, 2023ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ಡಿಎಸ್ಸಿ -ಶಾರ್) LVM3-M4 ವಾಹನದ ಮೂಲಕ ಆರಂಭವಾಗಿತ್ತು. ಆಗಸ್ಟ್ 23 ರಂದು ಲ್ಯಾಂಡಿಂಗ್ ದಿನದಂದು ಮಿಷನ್ ಚಂದ್ರನ ಮೇಲ್ಮೈಯಲ್ಲಿ ಐತಿಹಾಸಿಕ ಭೂಸ್ಪರ್ಶ ಮಾಡಿತು. ನಂತರ ಪ್ರಜ್ಞಾನ್ ರೋವರ್ ಅನ್ನು ನಿಯೋಜಿಸಲಾಯಿತು.
ಭೂಮಿಗೆ ಮರಳಿ ಬಂದ ಪ್ರೊಪಲ್ಷನ್ ಮಾಡ್ಯೂಲ್: ಇಸ್ರೋ ವಿಜ್ಞಾನಿಗಳಿಗೆ ಚಂದ್ರನ ಮೇಲ್ಮೈ ಬಗ್ಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಅಲ್ಲಿ ಅಧ್ಯಯನ ಉದ್ದೇಶಗಳನ್ನು ಸಾಧಿಸಿದ ನಂತರ, ಚಂದ್ರಯಾನ್ -3 ಪ್ರೊಪಲ್ಷನ್ ಮಾಡ್ಯೂಲ್ 2023ರ ಅಕ್ಟೋಬರ್ 9 ರಂದು ಪ್ರಾರಂಭವಾದ ಸರಣಿ ಕಾರ್ಯಾಚರಣೆಗಳ ನಂತರ 22 ನವೆಂಬರ್ 2023ರಂದು ಭೂಮಿಯ ಕಕ್ಷೆಗೆ ಮರಳಿತು. ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ -3ರ ಸಾಫ್ಟ್ ಲ್ಯಾಂಡಿಂಗ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಮತ್ತೆ ಭೂಮಿಯ ಕಕ್ಷೆಗೆ ಮರಳುವ ನಡುವೆ, ಈ ಮಿಷನ್ ಚಂದ್ರನ ಮೇಲೆ ಎರಡನೇ ಹಾಪ್ ಮಾಡುತ್ತದೆ ಎಂದು ಇಸ್ರೋ ಭಾವಿಸಿತ್ತು, ಆದರೆ ಅದು ಸಂಭವಿಸಲಿಲ್ಲ.
ಮಿಷನ್ 2035 ರ ಹಾದಿಯಲ್ಲಿ ಒಂದು ಮೈಲಿಗಲ್ಲು: ಚಂದ್ರಯಾನ -3 ಮಿಷನ್, ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಇಳಿಯುವ ಮೊದಲ ರಾಷ್ಟ್ರವಾಗುವುದು ಮಾತ್ರವಲ್ಲದೆ 2035 ರ ವೇಳೆಗೆ ಮೊದಲ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮತ್ತು ಚಂದ್ರನ ಮೇಲ್ಮೈಗೆ ಮೊದಲ ಭಾರತೀಯನನ್ನು ಕಳುಹಿಸುವ ಭಾರತದ ಮಿಷನ್ 2035 ಗೆ ಸಂಬಂಧಿಸಿದಂತೆ ಇದೊಂದು ಗೇಮ್ ಚೇಂಜರ್ ಎಂದೇ ಹೇಳಬಹುದು. ಚಂದ್ರಯಾನ -3 ಮಿಷನ್ನ ಯಶಸ್ಸು ಬಾಹ್ಯಾಕಾಶ ಸಂಶೋಧನೆಯನ್ನು ಖಾಸಗಿಯವರಿಗೆ ಮುಕ್ತಗೊಳಿಸಲು ದಾರಿ ಮಾಡಿದೆ.