ಒಟ್ಟಾವ(ಕೆನಡಾ):ನೀವು ವಿದ್ಯಾರ್ಥಿಯೇ?, ಉದ್ಯೋಗಿಯೇ?.. ಹಾಗಾದರೆ ಖಂಡಿತಾ ನೀವು ಶಾಲೆಗೋ, ಕಾಲೇಜಿಗೋ ಅಥವಾ ಆಫೀಸಿಗೋ ರಜೆ ಹಾಕಿಯೇ ಇರುತ್ತೀರಿ. ಅನಾರೋಗ್ಯದ ರಜೆ ಬೇಕೆಂದರೆ ಜ್ವರ, ತಲೆನೋವು, ನೆಗಡಿ ಇಂಥಹ ಕಾರಣಗಳನ್ನು ಹೇಳಿಯೂ ಇರುತ್ತೀರಿ. ಇದು ಅತ್ಯಂತ ಸಹಜ. ಆದರೆ ಈಗ ಈ ಕಾರಣಗಳ ಪಟ್ಟಿಗೆ ಹೊಸದೊಂದು 'ಅನಾರೋಗ್ಯ' ಸೇರ್ಪಡೆಯಾಗಿದೆ.
ಹೌದು. ಕೆನಡಾದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು 'ಹವಾಮಾನ ಬದಲಾವಣೆ'ಯ 'ಅನಾರೋಗ್ಯ'ಕ್ಕೀಡಾಗಿದ್ದಾರೆ. ಈ ಮೂಲಕ ಜಗತ್ತಿನಲ್ಲೇ ಮೊದಲ ಬಾರಿಗೆ ಹವಾಮಾನ ಬದಲಾವಣೆಯ ಅನಾರೋಗ್ಯಕ್ಕೆ ಈಡಾದವರೆಂಬ ಮೊದಲ 'ಹೆಗ್ಗಳಿಕೆ' ಈಕೆಗೆ ಸಲ್ಲಿದೆ.
ಕೂಟೆನೆ ಲೇಕ್ ಆಸ್ಪತ್ರೆಯ (Kootenay Lake Hospital) ಡಾ.ಕೈಲ್ ಮೆರ್ರಿಟ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಸ್ಥಳೀಯ ಮಾಧ್ಯಮವಾದ ಟೈಮ್ಸ್ ಕಾಲನಿಸ್ಟ್ (Times colonist) ಮಹಿಳೆಯೋರ್ವಳು ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಗಾಗಿದ್ದಾಳೆ ಎಂದು ವರದಿ ಮಾಡಿದೆ.