ನವದೆಹಲಿ: ಕೃತಕ ಬುದ್ಧಿಮತ್ತೆ (Artificial Intelligence -AI) ಮತ್ತು ಯಾಂತ್ರೀಕರಣದಿಂದಾಗಿ (Automation) ಸುಮಾರು 40 ಪ್ರತಿಶತದಷ್ಟು ಉದ್ಯೋಗಿಗಳು ಮುಂದಿನ ಮೂರು ವರ್ಷಗಳಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವುದು ಅನಿವಾರ್ಯವಾಗಲಿದೆ ಎಂದು ಹೊಸ ಅಧ್ಯಯನವೊಂದು ತೋರಿಸಿದೆ. ಅಂದರೆ ಜಗತ್ತಿನಲ್ಲಿರುವ 3.4 ಬಿಲಿಯನ್ ಉದ್ಯೋಗಿಗಳ ಪೈಕಿ 1.4 ಬಿಲಿಯನ್ ಜನರು ಎಐಗೆ ಹೊಂದಿಕೊಳ್ಳುವ ಕುಶಲತೆಗಳನ್ನು ಕಲಿಯಬೇಕಾಗುತ್ತದೆ.
ಸುಮಾರು 87 ಪ್ರತಿಶತದಷ್ಟು ಉದ್ಯೋಗಿಗಳನ್ನು ತೆಗೆದುಹಾಕುವ ಬದಲು ಅವರಿಗೆ ಹೊಸ ವಿಷಯಗಳನ್ನು ಕಲಿಸಬೇಕಾಗುತ್ತದೆ ಎಂದು ಟೆಕ್ ವಲಯದ ದಿಗ್ಗಜ ಐಬಿಎಂ ಹೇಳಿದೆ. ಮಾರ್ಕೆಟಿಂಗ್ ವಲಯದ ಶೇ 73, ಗ್ರಾಹಕ ಸೇವೆಯ ಶೇ 77, ಖರೀದಿ ಸಂಗ್ರಹ ವಲಯದ ಶೇ 97, ಅಪಾಯ ಮತ್ತು ಅನುಸರಣೆ ವಿಭಾಗದ ಶೇ 93 ಮತ್ತು ಹಣಕಾಸು ವಲಯದ ಶೇ 93 ರಷ್ಟು ಉದ್ಯೋಗಿಗಳು ನವೀನ ಕೌಶಲಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಐಬಿಎಂ ನ ಅಂಕಿ ಅಂಶಗಳು ತಿಳಿಸಿವೆ.
ಈ ವಿಷಯದಲ್ಲಿ ಉದ್ಯೋಗಿಗಳ ಅಭಿಪ್ರಾಯಗಳನ್ನು ನೋಡುವುದಾದರೆ- ಎಐ ಈಗಾಗಲೇ ಆರಂಭಿಕ ಹಂತದ ಹುದ್ದೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರತಿ ನಾಲ್ವರಲ್ಲಿ ಮೂರಕ್ಕಿಂತ ಹೆಚ್ಚು ಉದ್ಯೋಗಿಗಳು ಹೇಳಿದ್ದಾರೆ. ಕಾರ್ಯನಿರ್ವಾಹಕ ಅಥವಾ ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳ ಮೇಲೆ ಎಐ ಪರಿಣಾಮ ಬೀರಲಿದೆ ಎಂದು 22 ಪ್ರತಿಶತದಷ್ಟು ಉದ್ಯೋಗಿಗಳ ಅಭಿಪ್ರಾಯವಾಗಿದೆ. ಇನ್ನು ಸಿಇಓಗಳ ಅಭಿಪ್ರಾಯ ನೋಡುವುದಾದರೆ- ಕೇವಲ 28 ಪ್ರತಿಶತದಷ್ಟು ಸಿಇಒಗಳು ಮಾತ್ರ ತಮ್ಮ ಪ್ರಸ್ತುತ ಕಾರ್ಯಪಡೆಯ ಮೇಲೆ ಎಐ ಪರಿಣಾಮ ಬೀರಬಹುದು ಎಂದಿದ್ದಾರೆ.
"ಎಐ ವಿಕಸನಗೊಳ್ಳುತ್ತಲೇ ಇರುವುದರಿಂದ, ಅದರ ಪರಿಣಾಮಗಳು ವ್ಯವಸ್ಥಾಪಕ ಮತ್ತು ಕಾರ್ಯನಿರ್ವಾಹಕ ಶ್ರೇಣಿಗಳು ಸೇರಿದಂತೆ ಎಲ್ಲ ಶ್ರೇಣಿಯ ಉದ್ಯೋಗಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಯಾವುದೇ ಹಂತದ ಹುದ್ದೆಗಳು ಎಐನಿಂದ ಪ್ರಭಾವಿತವಾಗದೆ ಇರಲು ಸಾಧ್ಯವಿಲ್ಲ. ಇದರಿಂದ ಕಾರ್ಯನಿರ್ವಾಹಕರು ಕಂಪನಿಯಲ್ಲಿನ ಕೆಲಸದ ಪಾತ್ರಗಳು, ಕೌಶಲ್ಯ ಮಟ್ಟ ಮತ್ತು ಕೆಲಸವನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಮರುಪರಿಶೀಲಿಸುವುದು ಅನಿವಾರ್ಯವಾಗಲಿದೆ" ಎಂದು ಅಧ್ಯಯನ ಹೇಳಿದೆ.
ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಪ್ರಕಾರ, ಎಐನ ಬೆಳವಣಿಗೆಯು 2020 ಮತ್ತು 2025 ರ ನಡುವೆ ಜಾಗತಿಕವಾಗಿ 85 ಮಿಲಿಯನ್ ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ ಮತ್ತು 97 ಮಿಲಿಯನ್ ಹೊಸ ಮಾದರಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. 2023 ಮತ್ತು 2028 ರ ನಡುವೆ ಶೇಕಡಾ 44 ರಷ್ಟು ಕಾರ್ಮಿಕರ ಕೌಶಲ್ಯಗಳು ಬದಲಾವಣೆಯಾಗಲಿವೆ ಎಂದು ಅದು ಭವಿಷ್ಯ ನುಡಿದಿದೆ. ಇದು ಕಳೆದ ಐದು ವರ್ಷಗಳ ಅಂದಾಜಿಗಿಂತ ಶೇಕಡಾ 9 ರಷ್ಟು ಹೆಚ್ಚಾಗಿದೆ.
ಉದ್ಯೋಗಿಗಳ ಕೌಶಲಗಳನ್ನು ಉನ್ನತೀಕರಿಸಲು ಮತ್ತು ಆ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆ ಸಾಧಿಸಲು ಅನುಸರಿಸಬೇಕಾದ ಮೂರು ಪ್ರಮುಖ ಆದ್ಯತೆಗಳನ್ನು ತಜ್ಞರು ಗುರುತಿಸಿದ್ದಾರೆ. ಅವು ಯಾವುವೆಂದರೆ-
- ಉತ್ಪಾದಕತೆಯನ್ನು ಹೆಚ್ಚಿಸಲು ಸಾಂಪ್ರದಾಯಿಕ ಪ್ರಕ್ರಿಯೆಗಳು, ಉದ್ಯೋಗ ಪಾತ್ರಗಳು ಮತ್ತು ಸಾಂಸ್ಥಿಕ ರಚನೆಗಳನ್ನು ಪರಿವರ್ತಿಸುವುದು.
- ಹೊಸ ವ್ಯವಹಾರ ಮತ್ತು ಆಪರೇಟಿಂಗ್ ಮಾದರಿಗಳನ್ನು ಸಕ್ರಿಯಗೊಳಿಸುವುದು, ಮೌಲ್ಯ ಸೃಷ್ಟಿ ಮತ್ತು ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಮಾನವ-ಯಂತ್ರ ಪಾಲುದಾರಿಕೆಯನ್ನು (human-machine partnerships) ನಿರ್ಮಿಸುವುದು.
- ಹೆಚ್ಚಿನ ಮೌಲ್ಯದ ಕಾರ್ಯಗಳತ್ತ ಗಮನ ಹರಿಸಲು ಜನರಿಗೆ ಅನುವು ಮಾಡಿಕೊಡುವ ಮತ್ತು ಆದಾಯವನ್ನು ಹೆಚ್ಚಿಸುವ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದು.
ಇದನ್ನೂ ಓದಿ : ChatGPT ರಾಜಕೀಯ ಪಕ್ಷಪಾತಿ, ಎಡಪಂಥೀಯ ಪರ; ಸಂಶೋಧನೆಯಲ್ಲಿ ಹೊರಬಂದ ಸತ್ಯ!