ಸ್ಯಾನ್ ಫ್ರಾನ್ಸಿಸ್ಕೋ : ಐಫೋನ್ ಅನ್ನು 'ಐಪೇಜರ್' ಗೆ ಹೋಲಿಸುವ ಮೂಲಕ ಗೂಗಲ್ ಆ್ಯಪಲ್ ಅನ್ನು ಗೇಲಿ ಮಾಡಿದೆ. ಈ ಬಗ್ಗೆ ಹೊಸ ವೀಡಿಯೊ ಬಿಡುಗಡೆ ಮಾಡಿರುವ ಗೂಗಲ್, ಐಫೋನ್ಗಳನ್ನು ಹಳೆಯ ಕಾಲದ ಪೇಜರ್ಗಳಿಗೆ ಹೋಲಿಸಿದೆ. ಆ್ಯಪಲ್ ಈಗಲೂ ಆಧುನಿಕ ಆರ್ಸಿಎಚ್ ಅಂದರೆ ರಿಚ್ ಕಮ್ಯುನಿಕೇಷನ್ ಸರ್ವೀಸಸ್ ಮೆಸೇಜಿಂಗ್ ಪ್ರೋಟೋಕಾಲ್ ಅನ್ನು ಅಳವಡಿಸಿಕೊಂಡಿಲ್ಲ ಮತ್ತು ಆಂಡ್ರಾಯ್ಡ್ ಬಳಕೆದಾರರೊಂದಿಗೆ ಸಂದೇಶ ಕಳುಹಿಸಲು ದಶಕಗಳಷ್ಟು ಹಳೆಯ ಎಸ್ಎಂಎಸ್ / ಎಂಎಂಎಸ್ ಪ್ರೋಟೋಕಾಲ್ ಅನ್ನೇ ಬಳಸುತ್ತಿದೆ.
ಆರ್ಸಿಎಚ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಗೂಗಲ್ ಆಗಾಗ ಆ್ಯಪಲ್ಗೆ ತಿವಿಯುತ್ತಲೇ ಇದೆ. ಇದರ ಮುಂದುವರಿದ ಭಾಗವಾಗಿ ಗೂಗಲ್ ಈಗ Get the Message ಅಂದರೆ 'ಈಗಲಾದರೂ ಅರ್ಥ ಮಾಡಿಕೋ' ಎಂಬರ್ಥದಲ್ಲಿ ಆ್ಯಪಲ್ ವಿರುದ್ಧ ಆನ್ಲೈನ್ ಅಭಿಯಾನ ನಡೆಸುತ್ತಲೇ ಇದೆ. ಅದಕ್ಕಾಗಿಯೇ ಆ್ಯಪಲ್ ಫೋನ್ ಅನ್ನು ಐಪೇಜರ್ ಎಂದು ವ್ಯಂಗ್ಯವಾಡಿರುವ ಗೂಗಲ್ ಈಗಲಾದರೂ Get the Message ಎಂದು ಹೇಳಿದೆ.
"ಐಪೇಜರ್ ಎಂಬುದು ನಿಜವಲ್ಲ, ಆದರೆ ಆ್ಯಪಲ್ ಬಳಸುತ್ತಿರುವ ಹಳೆಯ ಎಸ್ಎಂಎಸ್ ತಂತ್ರಜ್ಞಾನದಿಂದ ಸಮಸ್ಯೆಗಳು ನಿಜವಾಗಿಯೂ ಇವೆ" ಎಂದು ಗೂಗಲ್ ಯೂಟ್ಯೂಬ್ ವೀಡಿಯೊ ವಿವರಣೆಯಲ್ಲಿ ಹೇಳಿದೆ. "ಟೆಕ್ಸ್ಟ್ ಮೆಸೇಜ್ ಕಳುಹಿಸುವ ಪ್ರಕ್ರಿಯೆಯನ್ನು ಎಲ್ಲರಿಗಾಗಿ ಮತ್ತಷ್ಟು ಉತ್ತಮಗೊಳಿಸೋಣ ಮತ್ತು ಆ್ಯಪಲ್ಗೆ ಇದರ ಸಂದೇಶ ತಲುಪಿಸೋಣ. ಆ್ಯಪಲ್ ಆರ್ಸಿಎಸ್ ತಂತ್ರಜ್ಞಾನಕ್ಕೆ ಅಪ್ಗ್ರೇಡ್ ಆಗಲು ಸಹಾಯ ಮಾಡೋಣ #GetTheMessage" ಎಂದು ಅದು ಹೇಳಿದೆ.