ಹೊಸದಿಲ್ಲಿ: ಭಾರತದ ಅನೇಕ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಭಾರತದಲ್ಲಿ ಕೋವಿಡ್ ಸೋಂಕು ಸಮುದಾಯ ಪ್ರಸರಣ ಹಂತ ತಲುಪಿರಬಹುದು ಎಂದು ಕೆಲ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಪೂನಂ ಖೇತ್ರಪಾಲ್ ಸಿಂಗ್ ಈ ವಾದವನ್ನು ಅಲ್ಲಗಳೆದಿದ್ದಾರೆ. ಸದ್ಯ ಭಾರತದಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ಮೂಲ ಪತ್ತೆಯಾಗುತ್ತಿರುವುದರಿಂದ ಸಮುದಾಯ ಪ್ರಸರಣ ಹಂತ ತಲುಪಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ, ಕೋವಿಡ್ ಹೋರಾಟದಲ್ಲಿ ಭಾರತ ಕೈಗೊಂಡ ಕ್ರಮಗಳು, ಟೆಸ್ಟಿಂಗ್ ಹಾಗೂ ಲಾಕ್ಡೌನ್ ಸೇರಿದಂತೆ ಹಲವಾರು ವಿಷಯಗಳ ಕುರಿತು ಪೂನಂ ಖೇತ್ರಪಾಲ್ ಸಿಂಗ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಪ್ರಶ್ನೆ: ಹೊಸ ವೈರಸ್ನ ನಡವಳಿಕೆ ಹಾಗೂ ಅದರ ಸ್ವರೂಪಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಂಡುಕೊಂಡಿರುವುದೇನು? ನೋವೆಲ್ ವೈರಸ್ ಕುರಿತು ಯಾವೆಲ್ಲ ಮಾಹಿತಿಗಳು ಬರುತ್ತಿವೆ? ಇದರ ಹರಡುವಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉತ್ತರ:ಸದ್ಯ ಲಭ್ಯವಿರುವ ಮಾಹಿತಿಯಂತೆ ಕೊರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ. ಆರಂಭಿಕ ಮಾಹಿತಿಗಳ ಪ್ರಕಾರ ಸೋಂಕು ತಗುಲಿದ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಾಣುತ್ತಿರುವ ಸಮಯದಲ್ಲಿ ಮತ್ತೊಬ್ಬರಿಗೆ ವೈರಸ್ ಹರಡುವ ಅಪಾಯ ಹೆಚ್ಚು. ಸೋಂಕಿನ ಲಕ್ಷಣಗಳು ಕಾಣಿಸುವ ಮುಂಚಿನ ಹಂತದ ಸೋಂಕು ಹರಡುವಿಕೆ ಹಾಗೂ ಆಯಾ ನಿರ್ದಿಷ್ಟ ಅವಧಿಯಲ್ಲಿ ಸೋಂಕು ಹರಡುವ ಕುರಿತಾಗಿ ತಿಳಿಯಲು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಲ್ಯಾಬ್ ಟೆಸ್ಟಿಂಗ್ಗಳಲ್ಲಿ ಕೊರೊನಾ ಇರುವುದು ದೃಢಪಟ್ಟಾಗಲೂ ಅಂಥ ವ್ಯಕ್ತಿಗಳಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸದ ಪ್ರಕರಣಗಳೂ ನಮ್ಮ ಮುಂದಿವೆ. ಸೋಂಕಿನ ಲಕ್ಷಣಗಳಿಲ್ಲದಿರುವಾಗಲೂ ಆ ವ್ಯಕ್ತಿಯಿಂದ ಸೋಂಕು ಹರಡುತ್ತದೆ ಎಂಬ ಕುರಿತು ಪ್ರಸ್ತುತ ನಮ್ಮ ಬಳಿ ಯಾವುದೇ ಆಧಾರಗಳಿಲ್ಲ. ಲಕ್ಷಣಗಳು ಕಾಣಿಸದಿದ್ದರೂ ಮೆರ್ಸ್ ಸೋಂಕು ಇನ್ನೊಬ್ಬರಿಗೆ ತಗುಲುತ್ತಿತ್ತು. ಆದರೆ ಕೋವಿಡ್ ವೈರಸ್ ಆ ರೀತಿ ಹರಡುವುದು ತುಂಬಾ ವಿರಳ. ಸೋಂಕಿನ ಲಕ್ಷಣಗಳಿರುವವರು ಉಸಿರು ಹೊರಬಿಟ್ಟಾಗ ಅಥವಾ ಸೀನಿದಾಗ ಬಹು ವೇಗವಾಗಿ ವೈರಸ್ ಹರಡುತ್ತದೆ. ಈ ಮುಖ್ಯ ವಿಷಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಕಲೆ ಹಾಕುತ್ತಿದ್ದು, ಸತತ ನಿಗಾ ವಹಿಸಿದೆ.
ಲಭ್ಯವಾಗುತ್ತಿರುವ ಸಾಕ್ಷಿಗಳ ಪ್ರಕಾರ, ಕೋವಿಡ್-19 ಹಾಗೂ ಬಾವಲಿಗಳ ಉಪಪ್ರಭೇದವಾದ ರಿನೊಲೋಫಸ್ ಬಾವಲಿಗಳಲ್ಲಿ ಹರಡುತ್ತಿರುವ ಕೊರೊನಾವೈರಸ್ಗಳಲ್ಲಿ ಸಾಮ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಚೀನಾದಲ್ಲಿ ಪ್ರಥಮ ಬಾರಿಗೆ ಈ ವೈರಸ್ ಮಾನವನಿಗೆ ಎಲ್ಲಿಂದ ಹರಡಿತು ಎಂಬುದನ್ನು ಈಗಲೇ ನಿಖರವಾಗಿ ಹೇಳಲಾಗುತ್ತಿಲ್ಲ.
ಒಟ್ಟಾರೆಯಾಗಿ ಯಾವುದೋ ಒಂದು ಪ್ರಾಣಿಯಿಂದ ಮಾನವನಿಗೆ ವೈರಸ್ ತಗುಲಿದೆ ಎಂಬುದನ್ನು ಮಾತ್ರ ಹೇಳಬಹುದು. ಸಾಕು ಪ್ರಾಣಿ, ವನ್ಯ ಜೀವಿ, ಮನೆಯಲ್ಲಿ ಸಾಕಿದ ವನ್ಯ ಜೀವಿ ಹೀಗೆ ಯಾವುದಾದರೂ ಆಗಿರಬಹುದು.
ಸೋಂಕು ತಗುಲಿದ ರೋಗಿಗಳಿಗೆ ಕಂಡು ಬರುವ ಲಕ್ಷಣಗಳು ಹೀಗಿವೆ: ಜ್ವರ (ಶೇ. 83-98) ಕೆಮ್ಮು (ಶೇ.68) ಮತ್ತು ಉಸಿರಾಟದ ತೊಂದರೆ (ಶೇ. 19-35). ಶೇ.40 ರಷ್ಟು ಪ್ರಕರಣಗಳಲ್ಲಿ ಸೌಮ್ಯ ಸ್ವರೂಪದ, ಶೇ.40 ರಷ್ಟು ಪ್ರಕರಣಗಳಲ್ಲಿ ಮಧ್ಯಮ ಹಾಗೂ ಶೇ.14 ರಷ್ಟು ಪ್ರಕರಣಗಳಲ್ಲಿ ತೀವ್ರತರದ ಮತ್ತು ಶೇ.5 ರಷ್ಟು ಪ್ರಕರಣಗಳಲ್ಲಿ ಅತಿ ಗಂಭೀರ ಸ್ವರೂಪದಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ವಯಸ್ಸಾದವರಿಗೆ ಇದರಿಂದ ಹೆಚ್ಚಿನ ಅಪಾಯವಿದೆ. ಆದಾಗ್ಯೂ ಈ ವಿಷಯದಲ್ಲಿ ನಮ್ಮ ಅಭಿಪ್ರಾಯಗಳು ಅತಿ ವೇಗವಾಗಿ ಬದಲಾಗುತ್ತಿವೆ.
ಪ್ರಶ್ನೆ:ಕೊರೊನಾ ವೈರಸ್ ಭಿನ್ನ ಮೇಲ್ಮೈಗಳಲ್ಲಿ ಬದುಕುಳಿಯುವ ಅವಧಿಯ ಕುರಿತಾಗಿ ಹಲವಾರು ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. (ಏರೋಸಾಲ್ ಮೇಲೆ 3 ತಾಸು, ತಾಮ್ರದ ಮೇಲೆ 4 ತಾಸು, ಕಟ್ಟಿಗೆಯ ಮೇಲೆ 24 ಗಂಟೆ ಮತ್ತು ಸ್ಟೀಲ್ ಹಾಗೂ ಪ್ಲಾಸ್ಟಿಕ್ ಮೇಲೆ 2 ರಿಂದ 3 ದಿನ). ಈ ಕುರಿತು ನಿಮ್ಮ ಅಭಿಪ್ರಾಯವೇನು?