ಮಾರಕ ಕೋವಿಡ್ -19 ಸಾಂಕ್ರಾಮಿಕವನ್ನು ಮಿಲೇನಿಯಮ್ ಕಾಯಿಲೆ ಎಂದೇ ಬಣ್ಣಿಸಲಾಗುತ್ತಿದೆ. ಇದು ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಗಂಭೀರ ಸವಾಲನ್ನು ಒಡ್ಡಿದೆ. ಹಾಗೆಯೇ ಹೆಚ್ಚಿನ ದೇಶಗಳ ಆರೋಗ್ಯ ಮತ್ತು ಅಭಿವೃದ್ಧಿಯ ಗುರಿಗಳನ್ನು ಬುಡಮೇಲು ಮಾಡಿದೆ.
ಕ್ಷಿಪ್ರ ಸಮಯದಲ್ಲಿ ಪ್ರಪಂಚದಾದ್ಯಂತ ಹಬ್ಬಿದ ಈ ಸಾಂಕ್ರಾಮಿಕ ರೋಗವು 18 ಲಕ್ಷ ಜನರನ್ನು ಸಾವಿನ ದವಡೆಗೆ ತಳ್ಳಿದೆ. ಅಮೆರಿಕಾ ಮತ್ತು ಬ್ರಿಟನ್ನಲ್ಲಿ ಸಾವಿನ ನರ್ತನ ಇನ್ನೂ ಮುಂದುವರೆದಿದೆ. ಅದರ ವ್ಯಾಪಕ ವಿನಾಶದ ನಡುವೆಯೂ ಲಸಿಕೆ ತಯಾರಿಸಲು ಸಂಶೋಧನೆಯು ಯುದ್ಧೋಪಾದಿಯಲ್ಲಿ ನಡೆದಿದೆ. ಕೋವಿಡ್-19 ಲಸಿಕೆ ನೀಡಲು ಕೆಲವು ದೇಶಗಳು ಈಗಾಗಲೇ ಹಸಿರು ನಿಶಾನೆ ತೋರಿವೆ.
ಭಾರತ್ ಬಯೋಟೆಕ್ (ಕೊವಾಕ್ಸಿನ್) ಮತ್ತು ಸೀರಮ್ ಇನ್ಸ್ಟಿಟ್ಯೂಟ್ (ಕೋವಿಶೀಲ್ಡ್) ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿವೆ. ಈ ಬೆಳವಣಿಗೆಗಳ ಮಧ್ಯೆ, ಸಾರ್ವತ್ರಿಕ ಕೋವಿಡ್ -19 ಲಸಿಕೆಗಾಗಿ ಮುಂಚಿತ ಸಿದ್ಧತೆಗಳ ಅಂಗವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ "ಡ್ರೈ ರನ್" ನಡೆಸಿತು.
ದೇಶದ ನಾಲ್ಕು ಪ್ರದೇಶಗಳನ್ನು ಆಯ್ದ ನಾಲ್ಕು ರಾಜ್ಯಗಳ ಪ್ರತಿ ಎರಡು ಜಿಲ್ಲೆಗಳ ಫಲಾನುಭವಿಗಳಿಗೆ ಲಸಿಕೆ ನೀಡುವುದು ಕೇಂದ್ರದ ಡ್ರೈ ರನ್ ಲಸಿಕೆ ಚಾಲನೆಯ ಉದ್ದೇಶವಾಗಿದೆ. ಸರ್ಕಾರದ ಇಲಾಖೆಗಳು ಲಸಿಕೆ ನೀಡಲು ತಯಾರಾಗಿರುವ ಕಾರ್ಯಕ್ಷಮತೆ ಮತ್ತು ಡಿಜಿಟಲ್ ಐಟಿ ಸೈಟ್‌ನಲ್ಲಿರುವ ಕೊರತೆಗಳನ್ನು ಕಂಡುಹಿಡಿಯಲು ಕೂಡ ಇದು ಉಪಯುಕ್ತವಾಗುತ್ತದೆ.
ಇದು ಅಕ್ಷರಶಃ ಮಹಾಯಜ್ಞವಾಗಲಿದೆ. ಈ ಸಂಶೋಧನೆಯ ಅಡಿಯಲ್ಲಿ ಲಸಿಕೆಯನ್ನು ಸುಮಾರು 29,000 ಕೋಲ್ಡ್ ಚೈನ್ ಕೇಂದ್ರಗಳಲ್ಲಿ ಸ್ಥಾಪಿಸಲಾದ 86,000 ಕೋಲ್ಡ್ ಸ್ಟೋರೇಜ್ ಯಂತ್ರಗಳಲ್ಲಿ ಸಂಗ್ರಹಿಸಲಾಗುತ್ತದೆ. ಲಸಿಕೆ ಸರಿಯಾದ ಸಮಯದಲ್ಲಿ ಅಗತ್ಯವಿರುವ ಸ್ಥಳಗಳಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಂಘಟಿತ ಪ್ರಯತ್ನದಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ತನ್ನ ಸರದಿ ಯಾವಾಗ ಬರುತ್ತದೆ ಮತ್ತು ಎಲ್ಲಿ ಲಸಿಕೆ ನೀಡಲಾಗುವುದು ಎಂದು ಎಸ್‌ಎಂಎಸ್ ಮೂಲಕ ತಿಳಿಸಬೇಕಾಗುತ್ತದೆ. ಪ್ರತಿಕೂಲ ಪ್ರತಿಕ್ರಿಯೆಗಳನ್ನು ಕಂಡುಹಿಡಿಯುವುದು ಮತ್ತು ಅವುಗಳ ಸೂಕ್ಷ್ಮಾತಿ ಸೂಕ್ಷ ವಿವರಗಳನ್ನು ಪಡೆದುಕೊಳ್ಳುವುದು ಉದ್ವೇಗದಿಂದ ಕೂಡಿದ ಕ್ಷಣಗಳಿಂದ ತುಂಬಿರುತ್ತದೆ. ಇವೆಲ್ಲವನ್ನೂ ಗಮನಿಸಿದರೆ, 23 ಸಚಿವಾಲಯಗಳ ಸಮನ್ವಯದೊಂದಿಗೆ ಕೇಂದ್ರವು ಕೈಗೊಂಡ ಲಸಿಕೆ ನೀಡುವ ಸಿದ್ಧತೆ ಅಭೂತಪೂರ್ವ ಕಾರ್ಯಾಚರಣೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.