ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೂರನೇ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ-3ಕ್ಕೆ 'ವೈಫಲ್ಯ ಆಧಾರಿತ ವಿನ್ಯಾಸ' ಆಯ್ಕೆ ಮಾಡಿಕೊಂಡಿದ್ದು, ಅದು ಯಶಸ್ವಿಯಾಗುವ ಭರವಸೆ ಹೊಂದಿದೆ. ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಆಗಸ್ಟ್ 15ರಂದು ವರ್ಚುವಲ್ ಭಾಷಣದ ಮೂಲಕ ಮಾತನಾಡಿ, ವಿಕ್ರಮ್ ಲ್ಯಾಂಡರ್‌ನ ಸಂಪೂರ್ಣ ವಿನ್ಯಾಸ ಯಾವುದೇ ರೀತಿಯ ಅಸಮರ್ಪಕತೆ ಉಂಟಾದರೂ ಅದನ್ನು ಎದುರಿಸಿ, ಯಶಸ್ವಿಯಾಗುವ ಭರವಸೆ ವ್ಯಕ್ತಪಡಿಸಿದರು.
ಚಂದ್ರಯಾನ-3ರ ವೈಫಲ್ಯ ಆಧಾರಿತವಾದ ವಿನ್ಯಾಸ ಯೋಜನೆಯಲ್ಲಿ ಏನೇನು ವೈಫಲ್ಯ ಉಂಟಾಗಬಹುದು ಎಂದು ಊಹಿಸಿ, ಅದರಿಂದ ಲ್ಯಾಂಡರ್ನ್ನು ಸುರಕ್ಷಿತವಾಗಿಟ್ಟು ಯಶಸ್ವಿ ಲ್ಯಾಂಡಿಂಗ್ ನಡೆಸಲು ಪೂರಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಒಂದು ವೇಳೆ ಎಲ್ಲವೂ ವಿಫಲವಾದರೂ, ಎಲ್ಲ ಸೆನ್ಸರ್‌ಗಳು ವಿಫಲವಾಗಿ, ಏನೂ ಕಾರ್ಯಾಚರಿಸುತ್ತಿಲ್ಲ ಎಂದಾದರೂ ವಿಕ್ರಮ್ ಲ್ಯಾಂಡಿಂಗ್ ನಡೆಸಲಿದೆ. "ಪ್ರೊಪಲ್ಷನ್ ವ್ಯವಸ್ಥೆ ಸರಿಯಾಗಿ ಕಾರ್ಯಾಚರಿಸಿದರೆ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ" ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದಾರೆ.
ಚಂದ್ರಯಾನ-3ರ ಕುರಿತು ಮಾತನಾಡುತ್ತ ಸೋಮನಾಥ್, ವಿಕ್ರಮ್ ಲ್ಯಾಂಡರ್ ಹಲವಾರು ವೈಫಲ್ಯಗಳನ್ನು ಎದುರಿಸಿದರೂ, ಅದು ಲಂಬವಾಗಿ ಲ್ಯಾಂಡಿಂಗ್ ನಡೆಸಲಿದೆ. ಇಸ್ರೋದ ಮುಂದಿರುವ ಸವಾಲೆಂದರೆ, ಸಮತಲವಾಗಿರುವ ವಿಕ್ರಮ್ ಲ್ಯಾಂಡರ್ನ್ನು ಲಂಬವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಸುವುದಾಗಿದೆ.
ಇಸ್ರೋ ಮುಂದಿರುವ ಇನ್ನೊಂದು ಸವಾಲೆಂದರೆ, ಲ್ಯಾಂಡರ್ ಮಾಡ್ಯುಲಿನ ಇಂಧನ ಬಳಕೆಯನ್ನು ಕಡಿಮೆಗೊಳಿಸಿ, ದೂರದ ಲೆಕ್ಕಾಚಾರವನ್ನು ಕರಾರುವಕ್ಕಾಗಿಸಿ, ಎಲ್ಲ ಆಲ್ಗಾರಿದಂಗಳು ಸರಿಯಾಗಿ ಕಾರ್ಯಾಚರಿಸುವಂತೆ ನೋಡಿಕೊಳ್ಳುವುದಾಗಿದೆ. "ಲ್ಯಾಂಡಿಂಗ್ ವೇಗ ಪ್ರತಿ ಸೆಕೆಂಡಿಗೆ ಮೂರು ಮೀಟರ್‌ಗಳಷ್ಟು ಇದ್ದರೆ ಅದರಿಂದಲೂ ಚಂದ್ರಯಾನ-3ಕ್ಕೆ ತೊಂದರೆ ಉಂಟಾಗದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಈ ಮೂಲಕ ಇದರ ಲಂಬವಾಗಿ ಇಳಿಯುವ ವೇಗ ನಿರ್ಬಂಧಿಸಲ್ಪಟ್ಟಿದ್ದು, ಚಂದ್ರಯಾನ-3 ಯಾವುದೇ ಕುಸಿತ ಎದುರಿಸುವುದಿಲ್ಲ" ಎಂದು ಸೋಮನಾಥ್ ವಿವರಿಸಿದರು.
ಇವೆಲ್ಲವುಗಳ ಹೊರತಾಗಿಯೂ, ಚಂದ್ರಯಾನ-2ರಲ್ಲಿ ಸಾಫ್ಟ್‌ವೇರ್ ತಪ್ಪಿನ ಕಾರಣದಿಂದ ಸರಣಿ ತೊಂದರೆಗಳು ಕಾಣಿಸಿಕೊಂಡವು. ಲ್ಯಾಂಡರ್ ಕೆಳಭಾಗದಲ್ಲಿರುವ ಐದು ರಾಕೆಟ್‌ಗಳು ಲ್ಯಾಂಡರ್ ಚಂದ್ರನ ಮೇಲ್ಮೈ ಬಳಿ ಬಂದಾಗ ಅದರ ವೇಗವನ್ನು ತಗ್ಗಿಸುವ ಉದ್ದೇಶ ಹೊಂದಿವೆ. ಆದರೆ, ಚಂದ್ರಯಾನ-2ರಲ್ಲಿ ಆ ರಾಕೆಟ್‌ಗಳು ಲ್ಯಾಂಡರ್ನ್ನು ನಿಧಾನಗೊಳಿಸುವ ಬದಲು, ಇನ್ನಷ್ಟು ವೇಗವಾಗಿ ಚಂದ್ರನ ಮೇಲ್ಮೈನತ್ತ ಚಲಿಸುವಂತೆ ಮಾಡಿದವು. ಸಾಫ್ಟ್‌ವೇರ್ ಸಹ ಕಂಟ್ರೋಲ್ ವ್ಯವಸ್ಥೆಗಳು ಅತಿಯಾಗಿ ವರ್ತಿಸುವಂತೆ ಮಾಡಿ, ಲ್ಯಾಂಡರ್ ಅದರ ಸ್ಥಾನ, ದಿಕ್ಕು ಮತ್ತು ವೇಗದಲ್ಲಿ ಅಸ್ಥಿರವಾಗುವಂತೆ ಮಾಡಿತು. ಕೊನೆಯದಾಗಿ, ಲ್ಯಾಂಡರ್‌ನ ಕಾಲುಗಳು ಅಷ್ಟೊಂದು ಗಟ್ಟಿಯಾಗಿರದ ಕಾರಣ, ಲ್ಯಾಂಡರ್ ಒತ್ತಡದೊಡನೆ ಚಂದ್ರನ ಮೇಲೆ ಇಳಿದಾಗ ಅವು ಮುರಿದು ಹೋದವು.
ಇದನ್ನೂ ಓದಿ:ಚಂದ್ರಯಾನ-3: ಲ್ಯಾಂಡರ್‌ನ ವೇಗ ತಗ್ಗಿಸುವ ಅಂತಿಮ ಹಂತದ ಪ್ರಕ್ರಿಯೆ ಯಶಸ್ವಿ; ಆಗಸ್ಟ್ 23ಕ್ಕೆ ಲ್ಯಾಂಡಿಂಗ್!