ಬೆಂಗಳೂರು: ತಾಯಿಯನ್ನು ತ್ಯಾಗಮಯಿ ಅಂತಾರೆ. ಮಕ್ಕಳಿಗೋಸ್ಕರ ಸಾವಿಗೂ ಸವಾಲು ಎಸೆದು ತ್ಯಾಗಕ್ಕೂ ಸೈ ಎನಿಸಿಕೊಂಡ ಹತ್ತು ಹಲವು ಉದಾಹರಣೆಗಳಿವೆ. ಆದರೆ, ಇಲ್ಲೊಬ್ಬರು ಮಗನ ಮಾತು ಕೇಳಿ 20 ವರ್ಷದಿಂದ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲೇ 1.31 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಸಿಕ್ಕಿಬಿದ್ದಾರೆ. ಇದೇ ಆರೋಪದಡಿ ತಾಯಿ-ಮಗನನ್ನು ನಗರ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಾಲಿವುಡ್ ಹಿರಿಯ ನಟ ಬೊಮನ್ ಇರಾನಿ ಸಹೋದರಿ ಖುರ್ಷೀದ್ ಇರಾನಿ ನೀಡಿದ ದೂರಿನ ಮೇರೆಗೆ ಮೇರಿ ಆಲಿಸ್ ಹಾಗೂ ಪುತ್ರ ಮೈಕೆಲ್ ವಿನ್ಸಂಟ್ ಎಂಬ ತಾಯಿ-ಮಗನನ್ನ ಬಂಧಿಸಲಾಗಿದೆ. ಹಲಸೂರಿನ ಅಬ್ಬಾಸ್ ಆಲಿ ರಸ್ತೆ ಬಳಿ ಖುರ್ಷೀದ್ ವಾಸವಿದ್ದು, ಈಕೆಯ ಮನೆಯಲ್ಲಿ 20 ವರ್ಷಗಳಿಂದ ಮೇರಿ ಆಲಿಸ್ ಮನೆಕೆಲಸ ಮಾಡಿಕೊಂಡು ಮಾಲೀಕಿಯ ವಿಶ್ವಾಸ ಗಳಿಸಿಕೊಂಡಿದ್ದಳು.
ಕೆಜಿಹಳ್ಳಿಯಲ್ಲಿ ಮೇರಿ ಹಾಗೂ ಆಕೆಯ ಮಗ ಮೈಕೆಲ್ ಪುತ್ರ ವಾಸವಿದ್ದು, ತನ್ನ ತಾಯಿ ಶ್ರೀಮಂತರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿರುವ ವಿಚಾರ ಅರಿತಿದ್ದ ಮೈಕೆಲ್, ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡುವಂತೆ ಪ್ರಚೋದಿಸುತ್ತಿದ್ದ. ಪ್ರಾರಂಭದಲ್ಲಿ ಮಗನಿಗೆ ತಾಯಿ ಬೈದು ಬುದ್ಧಿವಾದ ಹೇಳಿದ್ದಳು. ಕಾಲ ಕ್ರಮೇಣ ಅಮ್ಮನಿಗೆ ಇನ್ನಿಲ್ಲದ ಆಸೆ ತೋರಿಸಿ ಕಳ್ಳತನ ಮಾಡುವುದಕ್ಕೆ ಒತ್ತಡ ಹಾಕಿದ್ದಾನೆ.
ಒತ್ತಡಕ್ಕೆ ಸಿಲುಕಿ ಮೇರಿ ಕಳೆದ ಎರಡು ವರ್ಷಗಳಿಂದ 700 ಗ್ರಾಂನ 7 ಚಿನ್ನದ ಬಿಸ್ಕತ್ಗಳು, 85 ಲಕ್ಷ ರೂ. ನಗದು, 11 ಲಕ್ಷ ರೂ. ಮೌಲ್ಯದ 15 ಸಾವಿರ ಯುಎಸ್ಐ ಕರೆನ್ಸಿ, ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಳು. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕದ್ದ ಹಣವನ್ನು ಕ್ರಿಕೆಟ್ ಬೆಟ್ಟಿಂಗ್ ಆಡಿ ಕಳೆದ ಮಗ? :ಕಳ್ಳತನ ಪ್ರಕರಣದ ತನಿಖೆ ಕೈಗೊಂಡ ಹಲಸೂರು ಉಪ ವಿಭಾಗದ ಎಸಿಪಿ ನೇತೃತ್ವದ ತಂಡ, ನಾಪತ್ತೆಯಾಗಿದ್ದ ಮನೆ ಕೆಲಸದಾಕೆ ಮೇರಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಗನಿಗಾಗಿ ಕಳ್ಳತನ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.
ಮತ್ತೊಂದೆಡೆ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಮೈಕೆಲ್, ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೂವೆಲ್ಲರಿ ಶಾಪ್ವೊಂದರ ಬಳಿ ಡಿ.2 ರಂದು ಕದ್ದ ಮಾಲನ್ನು ಮಾರಾಟ ಮಾಡಲು ಮುಂದಾದಾಗ, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಆತನನ್ನು ಬಂಧಿಸಿ 10 ಲಕ್ಷ ರೂ. ಮೌಲ್ಯದ 2 ಚಿನ್ನದ ಬಿಸ್ಕತ್ ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಕಳೆದ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಕಳ್ಳತನ ಮಾಡಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಮೇರಿ ತನ್ನ ಮಗನಿಗೆ ತಂದು ಕೊಟ್ಟಿದ್ದಾಳೆ. ಈ ಹಣವನ್ನು ಮೈಕೆಲ್, ಐಪಿಎಲ್ ಬೆಟ್ಟಿಂಗ್ ಆಡಿ ಕಳೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.