ನ್ಯೂಯಾರ್ಕ್:ಇತ್ತೀಚೆಗೆಚಾಕು ಇರಿತಕ್ಕೀಡಾದ ಭಾರತೀಯ ಮೂಲದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಅವರೀಗ ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಡುತ್ತಿದ್ದಾರೆ. ಅಲ್ಲದೇ, ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸಾಹಿತ್ಯಿಕ ಸಂಸ್ಥೆಯಾದ ಚೌಟಕ್ವಾ ಅಧ್ಯಕ್ಷ ಮೈಕೆಲ್ ಹಿಲ್ ಟ್ವೀಟ್ ಮಾಡಿದ್ದು, ಸಲ್ಮಾನ್ ರಶ್ದಿ ವೆಂಟಿಲೇಟರ್‌ನಿಂದ ಹೊರ ಬಂದಿದ್ದಾರೆ. ಮಾತನಾಡುತ್ತಿದ್ದಾರೆ. ಪ್ರಾರ್ಥನೆ ಫಲಿಸಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ನ್ಯೂಜೆರ್ಸಿ ನಿವಾಸಿ ಹದಿ ಮಾತರ್ ಎಂಬಾತನಿಂದ 14 ಬಾರಿ ಚಾಕು ಇರಿತಕ್ಕೀಡಾದ ಸಲ್ಮಾನ್ ರಶ್ದಿ ಅವರ ಒಂದು ಕಣ್ಣು ಹಾಗೂ ಯಕೃತ್ತಿಗೆ ಬಲವಾದ ಗಾಯವಾಗಿದೆ. ಇದರಿಂದ ದೃಷ್ಟಿದೋಷ ಉಂಟಾಗುವ ಸಾಧ್ಯತೆ ಇದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಗಳು ಬಿತ್ತರವಾಗಿದ್ದವು.
ಪಶ್ಚಿಮ ನ್ಯೂಯಾರ್ಕ್ ಚೌಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರಶ್ದಿ ಅವರು ಉಪನ್ಯಾಸ ನೀಡುತ್ತಿದ್ದಾಗ 24 ವರ್ಷದ ಹದಿ ಮತರ್ ಎಂಬಾತ ದಿಢೀರ್ ವೇದಿಕೆಗೆ ಆಗಮಿಸಿ ಏಕಾಏಕಿ ಚಾಕುವಿನಿಂದ ದಾಳಿ ಮಾಡಿದ್ದ. ತಕ್ಷಣವೇ ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಶ್ದಿ ಮೇಲಿನ ದಾಳಿಯನ್ನು ವಿಶ್ವ ನಾಯಕರು ಮತ್ತು ಸಾಹಿತ್ಯ ವಲಯ ಖಂಡಿಸಿದೆ.
1. ಆರೋಪಿ ಹದಿ ಮತರ್ ಯಾರು?:ಸಲ್ಮಾನ್ ರಶ್ದಿಗೆ ಇರಿದ ಹದಿ ಮತರ್ ಶಿಯಾ ಕಟ್ಟರ್ ಮೂಲಭೂತವಾದಿ ಮತ್ತು ಇರಾನ್ ಬೆಂಬಲಿಗ ಎಂದು ಗೊತ್ತಾಗಿದೆ. ರಶ್ದಿ ಅವರು ದ ಸಟಾನಿಕ್ ವರ್ಸಸ್ ಕಾದಂಬರಿ ಬರೆದಿದ್ದಕ್ಕೆ ಪ್ರತಿಯಾಗಿ ಈತ ಹತ್ಯೆ ಯತ್ನ ನಡೆಸಿದ್ದಾನೆ ಎಂದು ಹೇಳಲಾಗಿದೆ. ಇದರ ಜೊತೆಗೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಇರಾನ್ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ ಫೋಟೋ ಹಾಕಿರುವುದು ಪತ್ತೆಯಾಗಿದೆ. ರಶ್ದಿ ವಿರೋಧಿಸುತ್ತಿದ್ದ ಇರಾನ್ ಸರ್ಕಾರದ ಪರ ಈತನ ಒಲವಿತ್ತು ಎಂಬುದು ಈ ಮೂಲಕ ತಿಳಿದು ಬಂದಿದೆ.
2. ದ ಸಟಾನಿಕ್ ವರ್ಸಸ್ ಕಾದಂಬರಿ ವಿವಾದವೇನು:ಸಲ್ಮಾನ್ ರಶ್ದಿ ಅವರು ದಶಕದ ಹಿಂದೆ ಬರೆದ ದ ಸಟಾನಿಕ್ ಕಾದಂಬರಿ ಮುಸ್ಲಿಂ ಧರ್ಮದ ವಿರುದ್ಧವಾಗಿದೆ ಎಂಬುದು ಆರೋಪ. ಇದರಲ್ಲಿ ಪ್ರವಾದಿ ಮಹಮ್ಮದ್ರನ್ನು ಅವಹೇಳನ ಮಾಡಲಾಗಿದೆ. ಧರ್ಮವನ್ನು ತುಚ್ಚವಾಗಿ ಕಾಣಲಾಗಿದೆ. ಪ್ರಾರ್ಥನೆಯ ಬಗ್ಗೆ ಸುಳ್ಳು ಬರೆಯಲಾಗಿದೆ ಎಂಬೆಲ್ಲಾ ಆರೋಪಗಳಿವೆ. ಇದರಿಂದ ಮುಸ್ಲಿಂ ರಾಷ್ಟ್ರಗಳು ರಶ್ದಿ ವಿರುದ್ಧ ಕೆಂಡಾಮಂಡಲವಾಗಿವೆ.
3. ಇರಾನ್ನಿಂದ ಕೊಲೆಗೆ ಫತ್ವಾ:ರಶ್ದಿಪುಸ್ತಕದ ವಿರುದ್ಧ ದೊಡ್ಡ ಪ್ರತಿಭಟನೆಯೂ ವ್ಯಕ್ತವಾಗಿತ್ತು. ಪಾಕಿಸ್ತಾನದಲ್ಲಿ ಈ ಪುಸ್ತಕಕ್ಕೆ ಬೆಂಕಿ ಹೆಚ್ಚಿ ಸುಡಲಾಗಿತ್ತು. ಈ ವೇಳೆ ನಡೆದ ಗಲಭೆಯಲ್ಲಿ 6 ಮಂದಿ ಹತರಾಗಿದ್ದರು. ಜೊತೆಗೆ ಇರಾನ್ನ ಅಂದಿನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿಯಾ ರಶ್ದಿ ವಿರುದ್ಧ ಫತ್ವಾ ಹೊರಡಿಸಿ ಕೊಲೆಗೆ ಕರೆ ನೀಡಿದ್ದ. ಇನ್ನೊಂದು ಸಂಘಟನೆ ರಶ್ದಿ ತಲೆ ಕಡಿದವರಿಗೆ 30 ಲಕ್ಷ ಹಣ ನೀಡುವುದಾಗಿಯೂ ಆಫರ್ ಘೋಷಿಸಿತ್ತು.
ಇದನ್ನೂ ಓದಿ:ಕುಲ್ಗಾಮ್‌ನಲ್ಲಿ ಉಗ್ರರ ಗ್ರೆನೇಡ್ ದಾಳಿಗೆ ಪೊಲೀಸ್ ಸಿಬ್ಬಂದಿ ಸಾವು