ಮಾಸ್ಕೊ (ರಷ್ಯಾ): ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಮತ್ತೊಮ್ಮೆ 'ಪರಮಾಣು' ಯುದ್ಧದ ಬೆದರಿಕೆಯನ್ನು ಒಡ್ಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಕೀವ್ನ ಪ್ರತಿದಾಳಿಯು ಯಶಸ್ವಿಯಾದಲ್ಲಿ ಮಾಸ್ಕೋ ಪರಮಾಣು ಅಸ್ತ್ರವನ್ನು ಬಳಸುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಮೆಡ್ವೆಡೆವ್ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಕಾಮೆಂಟ್ ಮಾಡಿದ್ದು, ಉಕ್ರೇನ್ ಪಡೆಗಳು ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಿದಲ್ಲಿ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.
"ನ್ಯಾಟೋ ಬೆಂಬಲಿತ ಉಕ್ರೇನ್ ಆಕ್ರಮಣವು ಯಶಸ್ವಿಯಾದರೆ ಮತ್ತು ಅವರು ನಮ್ಮ ಭೂಮಿಯ ಮೇಲೆ ನಿಯಂತ್ರಣ ಸಾಧಿಸಿದರೆ ರಷ್ಯಾದ ಅಧ್ಯಕ್ಷರ ತೀರ್ಪಿನ ಪ್ರಕಾರ ಪರಮಾಣು ಶಸ್ತ್ರಾಸ್ತ್ರವನ್ನು ಬಳಸಬೇಕಾಗುತ್ತದೆ" ಎಂದು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷರಾಗಿರುವ ಮೆಡ್ವೆಡೆವ್ ಹೇಳಿದರು. "ಅಂಥ ಸಮಯದಲ್ಲಿ ಬೇರೆ ಯಾವುದೇ ಆಯ್ಕೆ ನಮ್ಮ ಬಳಿ ಇರುವುದಿಲ್ಲ. ಆದ್ದರಿಂದ ನಮ್ಮ ಶತ್ರುಗಳು ನಮ್ಮ ಯೋಧರ ಯಶಸ್ಸಿಗಾಗಿ ಪ್ರಾರ್ಥಿಸಬೇಕು. ಆ ಮೂಲಕ ಅವರು ಜಾಗತಿಕ ಪರಮಾಣು ಯುದ್ಧ ಆರಂಭವಾಗದಂತೆ ನೋಡಿಕೊಳ್ಳಬೇಕು" ಎಂದು ಅವರು ಹೇಳಿದರು.
ಮೆಡ್ವೆಡೆವ್ ರಷ್ಯಾದ ಪರಮಾಣು ನೀತಿಯ ಬಗ್ಗೆ ಮಾತನಾಡಿದ್ದಾರೆ. ರಷ್ಯಾದ ವಿರುದ್ಧ ಆಕ್ರಮಣ ನಡೆದಾಗ ಅದಕ್ಕೆ ಪ್ರತಿಕ್ರಿಯೆಯಾಗಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂಬುದು ರಷ್ಯಾದ ಪರಮಾಣು ನೀತಿಯಾಗಿದೆ. ರಷ್ಯಾ ಸ್ವಾಧೀನಪಡಿಸಿಕೊಂಡ ಮತ್ತು ತನ್ನ ದೇಶದ ಸ್ವಂತ ಭಾಗವೆಂದು ಪುಟಿನ್ ಘೋಷಿಸಿದ ಪ್ರದೇಶವನ್ನು ಹಿಂಪಡೆಯಲು ಉಕ್ರೇನ್ ರಷ್ಯನ್ನರ ವಿರುದ್ಧ ಪ್ರತಿದಾಳಿ ನಡೆಸಿದೆ.
ಆದಾಗ್ಯೂ, ಈ ಪ್ರತಿದಾಳಿಯ ಪರಿಣಾಮವೇನಾಗಿದೆ ಎಂಬುದು ಇನ್ನೂ ನಿಖರವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ತನ್ನ ಯುದ್ಧ ನೀತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಮತ್ತು ಜೂನ್ 4 ರಿಂದ ಉಕ್ರೇನ್ ಮಿಲಿಟರಿ ಗಮನಾರ್ಹ ನಷ್ಟ ಅನುಭವಿಸಿದೆ ಎಂದು ಪುಟಿನ್ ಕಳೆದ ವಾರ ಹೇಳಿದ್ದಾರೆ.