ಕರ್ನಾಟಕ

karnataka

ETV Bharat / international

ಯುದ್ಧಕ್ಕೆ 6 ತಿಂಗಳು: ರಷ್ಯಾದ 80 ಸಾವಿರ, ಉಕ್ರೇನ್​ನ 9 ಸಾವಿರ ಸೈನಿಕರು ಸಾವು

ಉಕ್ರೇನ್​ ಮೇಲೆ ರಷ್ಯಾ ಫೆಬ್ರವರಿ 24 ರಂದು ದಾಳಿ ಆರಂಭಿಸಿದ್ದು ಈ ರಕ್ತ ಚರಿತ್ರೆಗೆ ನಾಳೆಗೆ 6 ತಿಂಗಳು ತುಂಬುತ್ತಿದೆ.

russia-attack
ಯುದ್ಧಕ್ಕೆ 6 ತಿಂಗಳು

By

Published : Aug 23, 2022, 9:39 AM IST

ಕೀವ್​:ಉಕ್ರೇನ್​ ಜೊತೆ ಸುದೀರ್ಘ ಸಮರಕ್ಕಿಳಿದಿರುವ ರಷ್ಯಾ ಆ ದೇಶದ 9 ಸಾವಿರಕ್ಕೂ ಅಧಿಕ ಸೈನಿಕರನ್ನು ಆಪೋಷನ ಪಡೆದಿದೆ. ಇದಕ್ಕಿಂತಲೂ ಆಘಾತಕಾರಿ ಅಂಶವೆಂದರೆ ರಷ್ಯಾದ 70 ರಿಂದ 80 ಸಾವಿರ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ ಎಂಬ ವಿಷಯ ಹೊರಬಿದ್ದಿದೆ.

ಈ ಬಗ್ಗೆ ಉಕ್ರೇನ್​ ಸೇನೆಯ ಜನರಲ್​ ಮಾಹಿತಿ ನೀಡಿದ್ದು, ಕಳೆದ 6 ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ನಮ್ಮ ದೇಶದ 9 ಸಾವಿರಕ್ಕೂ ಅಧಿಕ ಸೈನಿಕರು ಪ್ರಾಣ ಅರ್ಪಿಸಿದ್ದಾರೆ. ರಷ್ಯಾದ ಸೇನೆಯ ಸೈನಿಕರ ಸಾವಿನ ಸಂಖ್ಯೆ ನಮಗಿಂತಲೂ ದುಪ್ಪಟ್ಟಾಗಿದೆ. ಆ ದೇಶದ 70 ರಿಂದ 8 ಸಾವಿರಕ್ಕೂ ಅಧಿಕ ಸೈನಿಕರು ಯುದ್ಧದಲ್ಲಿ ಸಾವಿಗೀಡಾಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ.

ರಷ್ಯಾ ಶೆಲ್​ ದಾಳಿಗೆ ಹಾನಿಗೀಡಾದ ಬೃಹತ್​ ಕಟ್ಟಡ

ರಷ್ಯಾದ ಬಾಂಬ್​ ದಾಳಿಗೆ ಈವರೆಗೂ 5,587 ಉಕ್ರೇನಿಯನ್​ ನಾಗರಿಕರು ಮೃತಪಟ್ಟಿದ್ದಾರೆ. 7,890 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಕನಿಷ್ಠ 972 ಮಕ್ಕಳು ವಿವಿಧ ಕಾರಣಕ್ಕಾಗಿ ಅಸುನೀಗಿದ್ದಾರೆ. ಈ ಸಂಖ್ಯೆ ಅಂದಾಜಿಸಿದ್ದಕ್ಕಿಂತಲೂ ಹೆಚ್ಚಿರಬಹುದು ಎಂದು ವಿಶ್ವಸಂಸ್ಥೆ ಹೇಳುತ್ತಿದೆ.

ಹೆಚ್ಚು ನಷ್ಟ ಅನುಭವಿಸಿದ್ದು ಯಾರು?: ಉಕ್ರೇನ್​ ಮೇಲೆ ದಾಳಿ ಮಾಡಿದ ರಷ್ಯಾ ಮಾರ್ಚ್​ನಲ್ಲಿ ತಮ್ಮ 1351 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿತ್ತು. ಇದು ನಂಬಲರ್ಹವಾಗಿಲ್ಲ ಎಂದು ಉಕ್ರೇನ್​ ಹೇಳಿದೆ. 6 ತಿಂಗಳ ಯುದ್ಧದಲ್ಲಿ ಆ ದೇಶದ 70 ರಿಂದ 80 ಸಾವಿರ ಸೈನಿಕರು ಪ್ರಾಣ ತೆತ್ತಿದ್ದಾರೆ. ಸಾವಿರಾರು ಯೋಧರು ಗಾಯಗೊಂಡಿದ್ದಾರೆ ಎಂದು ಅಂದಾಜಿಸಿದೆ.

ದಾಳಿ ನಿರಂತರ:ನಿರಂತರವಾಗಿ ದಾಳಿ ನಡೆಸುತ್ತಿರುವ ರಷ್ಯಾಸೋಮವಾರದಂದು ಉಕ್ರೇನ್​ನ ನಿಕೋಪೋಲ್​ ಪ್ರದೇಶದ ಮೇಲೆ ನಡೆಸಿದ ಶೆಲ್​ ದಾಳಿಗೆ ನಾಲ್ವರು ಗಾಯಗೊಂಡಿದ್ದಾರೆ. ಈ ಪ್ರದೇಶ ನಿರಂತರ ದಾಳಿಗೆ ಒಳಗಾಗಿದ್ದು, ಸುಮಾರು 850 ಕಟ್ಟಡಗಳು ಧ್ವಂಸವಾಗಿವೆ. ಇಲ್ಲಿನ 1 ಲಕ್ಷ ಜನರಲ್ಲಿ ಅರ್ಧಕ್ಕೂ ಅಧಿಕ ಜನರು ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಷ್ಯಾ ದಾಳಿಗೆ ಧ್ವಂಸವಾದ ಮನೆ

ರಷ್ಯಾ ಈವರೆಗೂ ಉಕ್ರೇನ್​ ಮೇಲೆ 3,500 ಕ್ಕೂ ಅಧಿಕ ಕ್ಷಿಪಣಿಗಳನ್ನು ಬಳಸಿ ಪ್ರಾಣ, ಆಸ್ತಿ ಹಾನಿ ಉಂಟು ಮಾಡಿದೆ. ರಷ್ಯಾದ ಫಿರಂಗಿಗಳ ದಾಳಿಯನ್ಉ ನಿಖರವಾಗಿ ಎಣಿಕೆ ಮಾಡಲು ಅಸಾಧ್ಯವಾಗಿದೆ. ಪ್ರಬಲ ಮತ್ತು ಸಾಧಾರಣ ಅಸ್ತ್ರಗಳನ್ನು ಆ ದೇಶ ಬಳಸುತ್ತಿದೆ ಎಂದು ಉಕ್ರೇನ್​ ಅಧ್ಯಕ್ಷ ಜೆಲೆನ್​ಸ್ಕಿ ಹೇಳಿದ್ದಾರೆ.

ನಾಳೆ ಉಕ್ರೇನ್​ನಲ್ಲಿ ಸ್ವಾತಂತ್ರ್ಯೋತ್ಸವ:ಯುದ್ಧದ ಭೀಕರತೆ ನಡುವೆಯೇ ಉಕ್ರೇನ್​ ಆಗಸ್ಟ್​ 24 ರಂದು ಸ್ವಾತಂತ್ರ್ಯ ಸಂಭ್ರಮ ಆಚರಿಸಲಿದೆ. 1991 ರಲ್ಲಿ ಸೋವಿಯತ್​ ಒಕ್ಕೂಟದಿಂದ ಬೇರ್ಪಟ್ಟು ಉಕ್ರೇನ್​ ಸ್ವತಂತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿತು.

ಗಡಿ ಸಮಸ್ಯೆ ಮತ್ತು ನ್ಯಾಟೋಗೆ ಸೇರಲು ಇಚ್ಚಿಸಿದ ಉಕ್ರೇನ್​ ವಿರುದ್ಧ ರಷ್ಯಾ ಫೆಬ್ರವರಿ 24 ರಂದು ಯುದ್ಧ ಸಾರಿ ಅಂದಿನಿಂದ ನಿರಂತರವಾಗಿ ದಾಳಿ ನಡೆಸುತ್ತಿದೆ. ಉಕ್ರೇನ್​ ಅಮೆರಿಕಾ, ಇಂಗ್ಲೆಂಡ್​, ಜರ್ಮನಿ, ಫ್ರಾನ್ಸ್​ ಸೇರಿದಂತೆ ವಿವಿಧ ಪಾಶ್ಚಿಮಾತ್ಯ ರಾಷ್ಟ್ರಗಳ ನೆರವಿನಿಂದ ರಷ್ಯಾ ದಾಳಿಯನ್ನು ಎದುರಿಸುತ್ತಲೇ ಬಂದಿದೆ.

ಇದನ್ನೂ ಓದಿ:ಸಂಕಷ್ಟದಲ್ಲಿರುವ ಶ್ರೀಲಂಕಾಗೆ 21 ಸಾವಿರ ಟನ್​ ರಾಸಾಯನಿಕ ರಸಗೊಬ್ಬರ ನೀಡಿದ ಭಾರತ

ABOUT THE AUTHOR

...view details