ನೈಜೀರಿಯಾ:ದೇಶದಉತ್ತರ ಭಾಗದಲ್ಲಿರುವ ನೈಜರ್ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 200 ಜನರಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಸರಕುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಘಟನೆಯ ಸಂಪೂರ್ಣ ವಿವರ: ದೇಶದ ಆರ್ಥಿಕ ಕೇಂದ್ರವಾದ ಲಾಗೋಸ್‌ಗೆ ಆಹಾರ ಪದಾರ್ಥಗಳು ಮತ್ತು 200 ಕಾರ್ಮಿಕರೊಂದಿಗೆ ಮಂಗಳವಾರ ಟ್ರಕ್ ಸಂಚರಿಸುತ್ತಿತ್ತು. ಮಗಮಾ ಜಿಲ್ಲೆಯ ತಕಲಾಫಿಯಾ ಗ್ರಾಮಕ್ಕೆ ಬರುತ್ತಿದ್ದಂತೆ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಪಘಾತದ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ನೈಜರ್‌ನಲ್ಲಿ ಸಂಚಾರ ಉಲ್ಲಂಘಿಸುವವರಿಗೆ ಕಠಿಣ ದಂಡ ವಿಧಿಸುತ್ತಿದ್ದೇವೆ ಎಂದು ಮಗಮಾ ರಾಜ್ಯಪಾಲ ಮಹಮ್ಮದ್ ಉಮಾರು ಬಾಗೋ ಹೇಳಿದರು.
'ರಸ್ತೆಗಳು ಚೆನ್ನಾಗಿವೆಯೇ?': ಅಪಘಾತ ಸಂಭವಿಸಿದ ಪ್ರದೇಶದಲ್ಲಿ ಉತ್ತಮ ರಸ್ತೆಗಳಿಲ್ಲದ ಕಾರಣ ಹಗಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸಲು ಕೆಲವು ಪ್ರಯಾಣಿಕರು ರಾತ್ರಿಯಲ್ಲಿ ಹೆಚ್ಚು ಪ್ರಯಾಣಿಸುತ್ತಾರೆ. ಈ ಕಾರಣದಿಂದ ಓವರ್‌ಲೋಡ್ ಮಾಡಿದ ಟ್ರಕ್ ಪಲ್ಟಿಯಾಗಿದೆ ಎಂದು ನನಗನ್ನಿಸುತ್ತಿದೆ. ಟ್ರಕ್‌ನಲ್ಲಿದ್ದ ಜನರು ರಸ್ತೆಗಳ ಸ್ಥಿತಿ ಅಥವಾ ಅದರಲ್ಲಿರುವ ವಸ್ತುಗಳ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ನೈಜೀರಿಯಾದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್‌ನ ಸೆಕ್ಟರ್ ಕಮಾಂಡ್ ಕುಮಾರ್ ತ್ಸುಕ್ವಾಮ್ ತಿಳಿಸಿದರು.
ಅಧ್ಯಕ್ಷರ ಸಂತಾಪ: ನೈಜೀರಿಯಾದಲ್ಲಿ ಆಗಾಗ್ಗೆ ಸಂಭವಿಸುವ ರಸ್ತೆ ಅಪಘಾತಗಳಿಗೆ ಓವರ್‌ಲೋಡ್ ಮತ್ತು ಚಾಲಕರ ಅಜಾಗರೂಕತೆ ಪ್ರಮುಖ ಕಾರಣವಾಗಿದೆ ಎಂದು ತ್ಸುಕ್ವಾಮ್ ಹೇಳಿದರು. ಇದರೊಂದಿಗೆ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಮಗಳು ಪಾಲನೆಯಾಗುತ್ತಿಲ್ಲ. ಇದಕ್ಕಾಗಿ ವಿಧಿಸುವ ದಂಡದಿಂದಲೂ ಚಾಲಕರು ಪಾರಾಗುತ್ತಿದ್ದಾರೆ ಎಂದರು. ದುರಂತದ ಬಗ್ಗೆ ಆ ದೇಶದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಪ್ರತಿಕ್ರಿಯಿಸಿ, ಮೃತರ ಕುಟುಂಬಗಳಿಗೆ ಸಂತಾಪ ಹೇಳಿದ್ದಾರೆ. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.