ಬ್ಯಾಂಕಾಕ್ (ಥಾಯ್ಲೆಂಡ್):ಬಿಗಿ ಭದ್ರತೆಯ ನಡುವೆ ಥಾಯ್ಲೆಂಡ್‌ನ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ಆರಂಭಗೊಂಡಿದೆ. ಸುಮಾರು ಒಂದು ದಶಕದ ಅಧಿಕಾರದ ನಂತರ ಸೇನೆ ಬೆಂಬಲಿತ ಪ್ರಧಾನಿ ಪ್ರಯುತ್ ಚಾನ್-ಒ-ಚಾ ಅವರ ಸರ್ಕಾರವನ್ನು ವಿರೋಧ ಪಕ್ಷಗಳು ಸೋಲಿಸಲು ಮುಂದಾಗಿವೆ. ಯುವ ಮತದಾರರು ಮಿಲಿಟರಿ ಪ್ರಾಬಲ್ಯದ ಸಾಮ್ರಾಜ್ಯದಲ್ಲಿ ಬದಲಾವಣೆಗೆ ಮನವಿ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬದಲಾವಣೆಗಾಗಿ ಹಂಬಲಿಸುವ ಯುವ ಪೀಳಿಗೆ ಹಾಗೂ ಸಂಪ್ರದಾಯವಾದಿ, ರಾಜಪ್ರಭುತ್ವದ ಸ್ಥಾಪನೆಯ ನಡುವಿನ ಘರ್ಷಣೆ ನಡುವೆ ಭಾನುವಾರ ಬೆಳಗ್ಗೆ 8 ಗಂಟೆಗೆ (01:00 GMT) 95,000 ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಸಂಜೆ 5 ಗಂಟೆಗೆ (10:00 GMT) ಮುಕ್ತಾಯವಾಗಲಿದೆ. ಸುಮಾರು 52 ಮಿಲಿಯನ್ ಮತದಾರರು ಮುಂದಿನ ನಾಲ್ಕು ವರ್ಷಗಳವರೆಗೆ 500 ಸ್ಥಾನಗಳ ಹೊಸ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರನ್ನು ಆಯ್ಕೆ ಮಾಡುತ್ತಾರೆ.
ಬಿಲಿಯನೇರ್ ಮಾಜಿ ಪ್ರಧಾನಿ ತಕ್ಸಿನ್ ಶಿನವತ್ರಾ ಅವರ ಪುತ್ರಿ ನಾಯಕತ್ವದ ಪ್ರಮುಖ ವಿರೋಧ ಪಕ್ಷ 'ಫ್ಯೂ ಥಾಯ್' ಅಂತಿಮ ಅಭಿಪ್ರಾಯ ಸಂಗ್ರಹಣೆಯಲ್ಲಿ ಮುಂದಿದೆ. ಆದರೆ ಮತಪೆಟ್ಟಿಗೆಯಲ್ಲಿ ವಿಜಯ ಯಾರ ಪಾಲಾಗಬಹುದು? ಎಂಬ ನಿರೀಕ್ಷೆ ಹುಟ್ಟುಹಾಕಿದೆ. ಶುಕ್ರವಾರ ಫ್ಯೂ ಥಾಯ್‌ನ ಮುಕ್ತಾಯದ ರ್ಯಾಲಿಯಲ್ಲಿ ಮುಖ್ಯ ಅಭ್ಯರ್ಥಿ ಪೇಟೊಂಗ್ಟಾರ್ನ್ ಶಿನಾವತ್ರಾ ಅವರು, "ಥಾಯ್ಲೆಂಡ್ ಜುಂಟಾ ಆಡಳಿತದಿಂದ ಪ್ರಜಾಪ್ರಭುತ್ವದ ಆಡಳಿತಕ್ಕೆ ಬದಲಾಗುವ ಐತಿಹಾಸಿಕ ದಿನ" ಎಂದು ಹೇಳಿದ್ದರು.
ಕಳೆದ ಭಾನುವಾರದ ಆರಂಭಿಕ ಸುತ್ತಿನ ಮತದಾನದಲ್ಲಿ ಶೇ.90 ರಷ್ಟು ಮತದಾನವು ಬದಲಾವಣೆಯನ್ನು ಬಯಸುತ್ತಿರುವ ಮತದಾರರನ್ನು ಸೂಚಿಸುತ್ತದೆ. ಹೊಸ ಪ್ರಧಾನ ಮಂತ್ರಿಯನ್ನು 500 ಚುನಾಯಿತ ಸಂಸದರು ಮತ್ತು 250 ಸೆನೆಟ್ ಸದಸ್ಯರು ಪ್ರಯುತ್ ಅವರ ಜುಂಟಾದಿಂದ ನೇಮಕ ಮಾಡುತ್ತಾರೆ. 2019ರ ವಿವಾದಾತ್ಮಕ ಕೊನೆಯ ಚುನಾವಣೆಯಲ್ಲಿ, ಸಂಕೀರ್ಣ ಬಹು-ಪಕ್ಷೀಯ ಒಕ್ಕೂಟದ ಮುಖ್ಯಸ್ಥರಾಗಿ ಪ್ರಧಾನ ಮಂತ್ರಿಯಾಗಲು ಪ್ರಯುತ್ ಸೆನೆಟ್ ಬೆಂಬಲವನ್ನು ಪಡೆದಿದ್ದರು.