ಕಾಬೂಲ್ (ಅಫ್ಘಾನಿಸ್ತಾನ): ಪೂರ್ವ ಪಕ್ಟಿಕಾ ಪ್ರಾಂತ್ಯದ ಖುಸಮಂದ್ ಪ್ರದೇಶದಲ್ಲಿ ಕಳ್ಳತನದ ಅಪರಾಧಿಗಳಿಬ್ಬರಿಗೆ ಸಾರ್ವಜನಿಕವಾಗಿ ಛಡಿಯೇಟು ಶಿಕ್ಷೆ ನೀಡಲಾಗಿದೆ ಎಂದು ತಾಲಿಬಾನ್‌ನ ಸುಪ್ರೀಂ ಕೋರ್ಟ್ ಪ್ರಕಟಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಶನಿವಾರ ಸುಪ್ರೀಂ ಕೋರ್ಟ್ ನೀಡಿದ ಹೇಳಿಕೆಯ ಪ್ರಕಾರ, ತಮ್ಮ ಅಪರಾಧಗಳನ್ನು ಒಪ್ಪಿಕೊಂಡ ಇಬ್ಬರು ವ್ಯಕ್ತಿಗಳನ್ನು ತಾಲಿಬಾನ್ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದರು. ನಂತರ ಅವರನ್ನು ಸಾರ್ವಜನಿಕವಾಗಿ ಶಿಕ್ಷಿಸಲಾಗಿದೆ. ಮತ್ತೊಮ್ಮೆ ಯಾರೂ ತಪ್ಪು ಮಾಡದಂತೆ ಸಾರ್ವಜನಿಕರಿಗೆ ಸಂದೇಶ ನೀಡುವ ನಿಟ್ಟಿನಲ್ಲಿ ಹೀಗೆ ಛಡಿಯೇಟು ನೀಡಲಾಗಿದೆ ಎಂದು ತಾಲಿಬಾನ್ ಹೇಳಿದೆ.
ಈ ರೀತಿಯ ಶಿಕ್ಷೆ ನೀಡುವುದನ್ನು ಅಲ್ಲಿನ ಕಾನೂನಿನಲ್ಲಿ ಸಮರ್ಥಿಸಲಾಗಿಲ್ಲದಿದ್ದರೂ ಅಪರಾಧಿಗಳನ್ನು ಸಾರ್ವಜನಿಕವಾಗಿ ಥಳಿಸಲಾಗಿದೆ ಸ್ಥಳದಲ್ಲಿ ಹಾಜರಿದ್ದವರು ಹೇಳಿದ್ದಾರೆ. ಕಳೆದ ವರ್ಷ, ತಾಲಿಬಾನ್ ಅಧಿಕಾರಿಗಳು ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಕೈದಿಗಳಿಗೆ ಛಡಿಯೇಟು ನೀಡಲು ಪ್ರಾರಂಭಿಸಿದ್ದರು. ಮಾನವ ಹಕ್ಕುಗಳ ಸಂಘಟನೆಗಳು ಸೇರಿದಂತೆ ಇಡೀ ವಿಶ್ವದಲ್ಲಿ ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸಾರ್ವಜನಿಕವಾಗಿ ಮರಣದಂಡನೆ ನೀಡುವ ಕ್ರಮಗಳನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಮಾನವ ಹಕ್ಕುಗಳು, ಸಭ್ಯತೆ ಮತ್ತು ಕಾನೂನುಗಳನ್ನು ಎತ್ತಿಹಿಡಿಯುವಂತೆ ಅಫ್ಘಾನಿಸ್ತಾನ ಸರ್ಕಾರಕ್ಕೆ ವಿಶ್ವಸಂಸ್ಥೆ ಪದೇ ಪದೆ ಒತ್ತಾಯಿಸುತ್ತಿರುವುದು ಗಮನಾರ್ಹ.
ಅಫ್ಘಾನಿಸ್ತಾನದಲ್ಲಿ ಕ್ರೂರವಾಗಿ ಶಿಕ್ಷೆ ನೀಡುತ್ತಿರುವ ಬಗ್ಗೆ ವಿಶ್ವಸಂಸ್ಥೆಯು ಕಳೆದ ತಿಂಗಳು ವಿವರವಾದ ವರದಿಯೊಂದನ್ನು ಬಿಡುಗಡೆ ಮಾಡಿದೆ. ಹಿಂದಿನ ಆರು ತಿಂಗಳಲ್ಲಿ 274 ಪುರುಷರು, 58 ಮಹಿಳೆಯರು ಮತ್ತು ಇಬ್ಬರು ಬಾಲಕರನ್ನು ಸಾರ್ವಜನಿಕವಾಗಿ ಥಳಿಸಲಾಗಿದೆ ಎಂದು ವರದಿ ಹೇಳಿದೆ. ಮತ್ತೊಬ್ಬ ಕೈದಿಯನ್ನು ತಾಲಿಬಾನ್ ಅಧಿಕಾರಿಗಳು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದಾರೆ ಎಂಬುದನ್ನು ಕೂಡ ವರದಿ ಬಹಿರಂಗಪಡಿಸಿದೆ. ಆಗಸ್ಟ್ 2021 ರಲ್ಲಿ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನದಲ್ಲಿ ಅಧಿಕಾರ ಪಡೆದ ನಂತರ ಮಹಿಳೆಯರು ಮತ್ತು ಬಾಲಕಿಯರ ಮೇಲೆ ನಿರಂತರವಾಗಿ ಅಮಾನವೀಯ ನಿರ್ಬಂಧಗಳನ್ನು ವಿಧಿಸುತ್ತಿದೆ. ಅವರು ಸಾರ್ವಜನಿಕ ಜೀವನ, ಉದ್ಯೋಗ ಅಥವಾ ಶಿಕ್ಷಣದಲ್ಲಿ ಭಾಗವಹಿಸುವುದನ್ನು ತಡೆಯುತ್ತಿದೆ.