ಖಾರ್ಟೂಮ್ (ಸುಡಾನ್): ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಏಪ್ರಿಲ್ 15 ರಿಂದ ಆರಂಭವಾಗಿರುವ ಹಿಂಸಾತ್ಮಕ ಸಂಘರ್ಷದ ನಂತರ ಸುಮಾರು 1.4 ಮಿಲಿಯನ್ ಜನ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ (OCHA) ಕಚೇರಿ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಸುಡಾನ್‌ನಲ್ಲಿ 8,43,100 ಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಇಂಟರ್ ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ (IOM) ವರದಿಯಲ್ಲಿ ಬಹಿರಂಗವಾಗಿದೆ. ವೈಟ್ ನೈಲ್ (25.2 ಪ್ರತಿಶತ), ವೆಸ್ಟ್ ಡಾರ್ಫರ್ (18.6 ಪ್ರತಿಶತ) ಮತ್ತು ನೈಲ್ ನದಿ (13.8 ಪ್ರತಿಶತ) ಪ್ರದೇಶಗಳಲ್ಲಿನ ಜನ ಅತ್ಯಧಿಕ ಸಂಖ್ಯೆಯಲ್ಲಿ ಸ್ಥಳಾಂತರಗೊಂಡಿದ್ದಾರೆ.
ದೇಶದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡವರ ಪೈಕಿ ರಾಜಧಾನಿ ಖಾರ್ಟೂಮ್ನಿಂದ ಅತಿ ಹೆಚ್ಚು ಶೇ 72ರಷ್ಟು ಅಂದರೆ ಸುಮಾರು 6 ಲಕ್ಷ 50 ಸಾವಿರ ಜನ ಸ್ಥಳಾಂತರವಾಗಿದ್ದಾರೆ. ಇದರ ನಂತರ ಪಶ್ಚಿಮ ಡಾರ್ಫರ್ನಿಂದ ಶೇ 19, ದಕ್ಷಿಣ ಡಾರ್ಫರ್ನಿಂದ ಶೇ 5.6, ಉತ್ತರ ಡಾರ್ಫರ್ನಿಂದ ಶೇ 2.2, ಉತ್ತರ ಕೊರ್ಡೊಫಾನ್ನಿಂದ ಶೇ 1 ಮತ್ತು ಮಧ್ಯ ಡಾರ್ಫರ್ನಿಂದ ಶೇ 0.21 ರಷ್ಟು ಜನ ಸ್ಥಳಾಂತರವಾಗಿದ್ದಾರೆ.
ಜೊತೆಗೆ 248,000 ಕ್ಕೂ ಹೆಚ್ಚು ಜನರು ನೆರೆಯ ದೇಶಗಳಾದ ಮಧ್ಯ ಆಫ್ರಿಕಾದ ಗಣರಾಜ್ಯ, ಚಾಡ್, ಈಜಿಪ್ಟ್, ಇಥಿಯೋಪಿಯಾ ಮತ್ತು ದಕ್ಷಿಣ ಸುಡಾನ್ ಗಡಿ ದಾಟಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಮಿತಿ (UNHCR) ಹೇಳಿದೆ. OCHA ವರದಿಯ ಪ್ರಕಾರ ಲಕ್ಷಾಂತರ ಜನರು ಮೂಲಭೂತ ಆರೋಗ್ಯ ಸೇವೆಗಳು ಸಹ ಲಭ್ಯವಿಲ್ಲದೆ ಸಂಕಷ್ಟದಲ್ಲಿದ್ದಾರೆ.