ಕರ್ನಾಟಕ

karnataka

ETV Bharat / international

ಐಎಂಎಫ್ ಸಾಲ ಬರುವವರೆಗೂ ಹಣಕಾಸು ನೆರವು ನೀಡುವಂತೆ ಭಾರತಕ್ಕೆ ಶ್ರೀಲಂಕಾ ಮನವಿ - ಶ್ರೀಲಂಕಾ-ಭಾರತ ಸಂಬಂಧಗಳು

ನೆರೆಯ ರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಐಎಂಎಫ್​ನಿಂದ ಸಾಲ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ನಾಲ್ಕು ತಿಂಗಳು ತೆಗೆದುಕೊಳ್ಳಲಿದ್ದು, ಅಲ್ಲಿಯವರೆಗೆ ಹಣಕಾಸು ವಿಚಾರದಲ್ಲಿ ಸಹಕಾರ ನೀಡಲು ಭಾರತಕ್ಕೆ ಶ್ರೀಲಂಕಾ ಮನವಿ ಮಾಡಿದೆ.

sri-lanka-seeks-bridging-finance-from-india-till-imf-bailout
ಹಣಕಾಸು ವಿಚಾರದಲ್ಲಿ ಸಹಕರಿಸಿ: ಭಾರತಕ್ಕೆ ಶ್ರೀಲಂಕಾ ಮನವಿ

By

Published : Apr 17, 2022, 4:06 PM IST

ಕೊಲಂಬೊ(ಶ್ರೀಲಂಕಾ):ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ಈಗ ಸಹಾಯಕ್ಕಾಗಿ ಭಾರತಕ್ಕೆ ಮನವಿ ಮಾಡಿದೆ. ಭಾರತ ಕೂಡಾ ಸಾಕಷ್ಟು ರೀತಿಯಲ್ಲಿ ಸಹಾಯಹಸ್ತ ಚಾಚಿದೆ. ಈಗ ಆರ್ಥಿಕ ಸಂಕಷ್ಟದಿಂದ ಹೊರಬರಲು ಭಾರತದ ನೆರವು ಅತ್ಯಗತ್ಯ ಎಂದು ಅರಿತಿರುವ ಶ್ರೀಲಂಕಾ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್​​) ಸಾಲ ಸಿಗುವವರೆಗೆ ಹಣಕಾಸು ನೆರವು ನೀಡುವಂತೆ ಮನವಿ ಮಾಡಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ ಶ್ರೀಲಂಕಾಗೆ ಸಾಲ ಒದಗಿಸಲು ಇನ್ನೂ ಮೂರರಿಂದ ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಸಂಕಷ್ಟ ನಿಭಾಯಿಸಲು ಬೇರೆ ಬೇರೆ ಸಂಸ್ಥೆಗಳಿಂದ ಮತ್ತು ಬೇರೆ ಬೇರೆ ರಾಷ್ಟ್ರಗಳಿಗೆ ಹಣಕಾಸು ನೆರವು ನೀಡುವಂತೆ ಮನವಿ ಮಾಡಲು ಭಾರತ ತನ್ನ ಪ್ರಭಾವವನ್ನು ಬಳಸುವಂತೆ ಶ್ರೀಲಂಕಾ ಕೇಳಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಜಪಾನ್​​ನಂತಹ ರಾಷ್ಟ್ರಗಳ ಮೇಲೆ ತನ್ನ ಪ್ರಭಾವ ಬೀರುವಂತೆಯೂ ಭಾರತಕ್ಕೆ ಮನವಿ ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ರೀಲಂಕಾದ ಹಣಕಾಸು ಸಚಿವರು ಮತ್ತು ಶ್ರೀಲಂಕಾದ ಹೈಕಮಿಷನರ್ ಜೊತೆಗೆ ಹಲವಾರು ಸುತ್ತಿನ ಚರ್ಚೆಗಳಲ್ಲಿ ಈ ಬಗ್ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ಶ್ರೀಲಂಕಾದ ಹಣಕಾಸು ಸಚಿವ ಅಲಿ ಸಬ್ರಿ ಮುಂದಿನ ವಾರ ಅಮೆರಿಕದಲ್ಲಿ ಸೀತಾರಾಮನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಏಷ್ಯನ್ ಕ್ಲಿಯರಿಂಗ್ ಯೂನಿಯನ್‌ ಮೂಲಕ ಭಾರತ ಈಗಾಗಲೇ ಹಲವು ರೀತಿಯ ಸಹಕಾರವನ್ನು ಶ್ರೀಲಂಕಾಗೆ ನೀಡಿದೆ. ಆಹಾರ, ಇಂಧನ, ಔಷಧವನ್ನು ಸಾಲದ ರೂಪದಲ್ಲಿ ಒದಗಿಸಲಾಗಿದೆ. ಈವರೆಗೆ 2.4 ಶತಕೋಟಿ ಅಮೆರಿಕನ್ ಡಾಲರ್​ ನೆರವು ನೀಡಲಾಗಿದೆ. ಐಎಂಎಫ್​ ಸಾಲ ಶ್ರೀಲಂಕಾ ತಲುಪುವವರೆಗೆ ವಿವಿಧ ರಾಷ್ಟ್ರಗಳಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದ್ದು, ಇದೇ ಕಾರಣಕ್ಕಾಗಿ ಭಾರತದ ನೆರವಿಗೆ ಶ್ರೀಲಂಕಾ ಮನವಿ ಮಾಡಿದೆ.

ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರೊಂದಿಗೆ ಬಹುಪಕ್ಷೀಯ ಮಾತುಕತೆ ಮತ್ತು ಸಾಲದ ಕುರಿತು ಶ್ರೀಲಂಕಾದ ಅಧ್ಯಕ್ಷೀಯ ಸಲಹಾ ಗುಂಪಿನ ಸದಸ್ಯರ ನಡುವೆ ತಾಂತ್ರಿಕ ಮಾತುಕತೆಗಳು ಸಹಾ ನಡೆಯುತ್ತಿವೆ. ಶ್ರೀಲಂಕಾ ನಾಳೆ ಐಎಂಎಫ್​ನೊಂದಿಗೆ ಮಾತುಕತೆಯನ್ನು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ನಾಲ್ಕು ತಿಂಗಳುಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಶ್ರೀಲಂಕಾ ಭಾರತದಿಂದ 'ಬ್ರಿಡ್ಜಿಂಗ್ ಫೈನಾನ್ಸ್' ಅನ್ನು ನಿರೀಕ್ಷಿಸುತ್ತಿದೆ.

ಶ್ರೀಲಂಕಾವನ್ನು ತನ್ನ ಆರ್ಥಿಕ ಅವ್ಯವಸ್ಥೆಯಿಂದ ಹೊರತರಲು ಮುಂದೆ ಬಂದ ಏಕೈಕ ಮತ್ತು ಮೊದಲ ರಾಷ್ಟ್ರ ಭಾರತ ಆಗಿದೆ. ಈಗ ಸದ್ಯಕ್ಕೆ ಶ್ರೀಲಂಕಾ ಆಹಾರ ಮತ್ತು ಇಂಧನ ಕೊರತೆಯನ್ನು ಎದುರಿಸುತ್ತಿದೆ. ಇದು ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರ ಪರಿಣಾಮವಾಗಿ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವೂ ಸಾಕಷ್ಟು ಯತ್ನಿಸುತ್ತಿದೆ.

ಇದನ್ನೂ ಓದಿ:'ಆಫ್ಘನ್ನರ ತಾಳ್ಮೆ ಪರೀಕ್ಷಿಸಬೇಡಿ': ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ಕೊಟ್ಟ ತಾಲಿಬಾನ್

ABOUT THE AUTHOR

...view details