ಲಂಡನ್: ಉಕ್ರೇನ್ ವಿರುದ್ಧ ಉಗ್ರ ಸಮರ ಮುಂದುವರಿಸಿರುವ ರಷ್ಯಾದ ವಿರುದ್ಧ ವಿಶ್ವದ ವಿವಿಧ ರಾಷ್ಟ್ರಗಳ ಆಕ್ರೋಶ ಮುಂದುವರಿದಿದೆ. ಒಂದೆಡೆ ಉಕ್ರೇನ್‌ಗೆ ಸಹಾಯ ಮಾಡುತ್ತಲೇ ಮತ್ತೊಂದೆಡೆ ರಷ್ಯಾದ ಮೇಲೆ ನಿರ್ಬಂಧ ಹೇರುತ್ತಲೇ ಪಾಶ್ಚಿಮಾತ್ಯ ದೇಶಗಳು ಪುಟಿನ್ ಸೇನೆಯನ್ನು ಹತೋಟಿಗೆ ತರಲು ಯತ್ನಿಸುತ್ತಿವೆ. ಈ ಅನುಕ್ರಮದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಆಸಕ್ತಿದಾಯಕ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪುಟಿನ್ ಮಹಿಳೆಯಾಗಿದ್ರೆ ಇಂತಹ ಭೀಕರ ಯುದ್ಧವನ್ನು ನಡೆಸುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಮಹಿಳೆ ಅಲ್ಲ. ಆದರೆ, ಅವರು ಮಹಿಳೆಯಾಗಿದ್ರೆ ಈಗ ಮಾಡುತ್ತಿರುವಂತೆ ಉಕ್ರೇನ್ ಮೇಲಿನ ಹುಚ್ಚುತನದ ಹಾಗೂ ಪುರುಷಾಂಕಾರ ಆಕ್ರಮಣವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪುಟಿನ್ ಅವರ ದಂಡೆಯಾತ್ರೆ ಎಂಬುದು ವಿಷಪೂರಿತದಿಂದ ಕೂಡಿದ ಪುರುಷತ್ವಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಜರ್ಮನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಪಂಚದಾದ್ಯಂತ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕರೆ ನೀಡಿದ ಅವರು, ಅನೇಕ ಮಹಿಳೆಯರು ಅಧಿಕಾರ ಹಿಡಿಯಲು ಹಾರೈಸಿದರು. ಈ ಹಿನ್ನೆಲೆ ಪುಟಿನ್ ಅವರ ವರ್ತನೆಯನ್ನು ಉಲ್ಲೇಖಿಸಿದರು. ಭವಿಷ್ಯದ ಬೆದರಿಕೆಗಳನ್ನು ಹೇಗೆ ಎದುರಿಸಬೇಕೆಂದು ಚರ್ಚಿಸಲು NATO ದೇಶಗಳು ಭೇಟಿಯಾಗುವ ಸ್ವಲ್ಪ ಸಮಯಕ್ಕೂ ಮುನ್ನ ಬೋರಿಸ್ ಜಾನ್ಸನ್ ಅವರ ಟೀಕೆಗಳು ಹೊರ ಬಂದವು.