ಮಾಸ್ಕೋ (ರಷ್ಯಾ):ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೇ ದಂಗೆದ್ದಿದ್ದ ಖಾಸಗಿ ಸೇನಾ ಪಡೆ 'ವ್ಯಾಗ್ನರ್' ಉಕ್ರೇನ್ ಯುದ್ಧದಲ್ಲಿ ಮುಂದುವರಿಯುವುದಾಗಿ ಹೇಳಿದೆ. ಹೀಗಾಗಿ ಅದರ ನಾಯಕ, ಪುಟಿನ್ ಆಪ್ತ ಯೆವ್ಗನಿ ಪ್ರಿಗೊಝಿನ್ ವಿರುದ್ಧ ಸೂಚಿಸಿದ್ದ ಕ್ರಮವನ್ನು ಹಿಂತೆಗೆದುಕೊಳ್ಳಲಾಗಿದೆ.
50 ಸಾವಿರ ಸೇನಾ ಬಲವನ್ನು ಹೊಂದಿರುವ ಖಾಸಗಿ ಪಡೆ ವ್ಯಾಗ್ನರ್ ರಷ್ಯಾ ಪರವಾಗಿ ಉಕ್ರೇನ್ ಯುದ್ಧ ಭೂಮಿಯಲ್ಲಿ ಹೋರಾಡುತ್ತಿದೆ. ಆದರೆ, ಸೇನೆ ಹಲವಾರು ಸಂಕಷ್ಟಕ್ಕೀಡಾಗಿದ್ದರೂ ರಷ್ಯಾ ಸೇನಾಧ್ಯಕ್ಷರು ನಿರ್ಲಕ್ಷ್ಯ ವಹಿಸಿದ್ದರಿಂದ ಅಧಿಕೃತ ಸೇನೆ ವಿರುದ್ಧವೇ ಬಂಡಾಯ ಸಾರಿತ್ತು. ಅದರ ನಾಯಕ ಯೆವ್ಗನಿ ಪ್ರಿಗೊಝಿನ್ ಪುಟಿನ್ರ ಅತ್ಯಾಪ್ತರಾಗಿದ್ದರೂ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯುವುದಾಗಿ ಗುಡುಗಿದ್ದರು.
ವ್ಯಾಗ್ನರ್ ಪಡೆ ರಷ್ಯಾ ಒಂದು ನಗರವನ್ನೂ ವಶಕ್ಕೆ ಪಡೆದು ಮಾಸ್ಕೋದತ್ತ ದಾಳಿಗೆ ಮುಂದಾಗಿತ್ತು. ವ್ಯಾಗ್ನರ್ ಪಡೆಯ ಈ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ರಷ್ಯಾ ತಬ್ಬಿಬ್ಬಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಅಧ್ಯಕ್ಷ ಪುಟಿನ್ ದೇಶದ ವಿರುದ್ಧ ಬಂಡಾಯವೆದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಬೆಲಾರಸ್ ಅಧ್ಯಕ್ಷ ಮಧ್ಯಸ್ಥಿಕೆ:ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ವ್ಯಾಗ್ನರ್ ಪಡೆ ಮತ್ತು ರಷ್ಯಾ ಸೇನೆಯ ಮಧ್ಯೆ ಮಧ್ಯಸ್ಥಿಕೆ ವಹಿಸಿದ್ದರಿಂದ ಬಂಡಾಯ ಶಮನವಾಗಿದೆ. ಒಪ್ಪಂದದ ಮೇರೆಗೆ ಮಾಸ್ಕೋಗೆ ತನ್ನ ಪಡೆಗಳನ್ನು ಕಳುಹಿಸುವುದನ್ನು ಯೆವ್ಗನಿ ಪ್ರಿಗೊಝಿನ್ ನಿಲ್ಲಿಸಲು ನಿರ್ಧರಿಸಿದ್ದಾರೆ. ಸೇನಾ ನಾಯಕತ್ವದ ವಿರುದ್ಧದ ದಂಗೆಯನ್ನು ವ್ಯಾಗ್ನರ್ ಪಡೆ ಕೈಬಿಟ್ಟಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬೆಲಾರಸ್ನ ವಕ್ತಾರ ಡಿಮಿಟ್ರಿ ಎಸ್ ಪೆಸ್ಕೋವ್, ವ್ಯಾಗ್ನರ್ ಪಡೆಯ ನಾಯಕ ಪ್ರಿಗೊಝಿನ್ ಬೆಲಾರಸ್ಗೆ ತೆರಳಲಿದ್ದಾರೆ. ಬಿಕ್ಕಟ್ಟು ಶಮನವಾಗಿದೆ. ಪ್ರಿಗೊಝಿನ್ ಜೊತೆಗೆ ಬಂಡಾಯವೆದ್ದ ಹೋರಾಟಗಾರರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ದಂಗೆಯಲ್ಲಿ ಭಾಗವಹಿಸದ ವ್ಯಾಗ್ನರ್ ಹೋರಾಟಗಾರರು ರಷ್ಯಾದ ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಬಹುದು ಎಂದೂ ಹೇಳಿದ್ದಾರೆ.