ಇಸ್ಲಾಮಾಬಾದ್ (ಪಾಕಿಸ್ತಾನ): ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನದಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದ ಅಲೆ ಮತ್ತಷ್ಟು ವ್ಯಾಪಿಸುವುದನ್ನು ತಡೆಗಟ್ಟುವುದಲ್ಲದೇ, ನಿಯಂತ್ರಣಕ್ಕೆ ತರಲು ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ಪಾಕಿಸ್ತಾನ ಸರ್ಕಾರ ಬುಧವಾರ ಮಿಲಿಟರಿ ಕರೆಯಿಸಿದೆ.
8 ದಿನ ಎನ್ಎಬಿ ವಶಕ್ಕೆ ಖಾನ್:ಅಲ್ - ಖಾದಿರ್ ಟ್ರಸ್ಟ್ ಹೆಸರಲ್ಲಿ ರಾಷ್ಟ್ರದ ಖಜಾನೆಯ ಸುಮಾರು 5000, ಕೋಟಿ ಪಾಕ್ ರೂಪಾಯಿಯನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ರನ್ನು 14 ದಿನಗಳು ವಶಕ್ಕೆ ನೀಡುವಂತೆ ಎನ್ಎಬಿ (national accountability bureau) ಪರ ವಕೀಲರು ಮನವಿ ಮಾಡಿದರು.
ಆದರೆ, ಇದನ್ನು ವಿರೋಧಿಸಿದ ಖಾನ್ ಅವರ ವಕೀಲರು ಬಿಡುಗಡೆ ಮಾಡುವಂತೆ ನ್ಯಾಯಧೀಶರಿಗೆ ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ, ಇಮ್ರಾನ್ ಖಾನ್ ಅವರನ್ನು 8 ದಿನಗಳು ಎನ್ಎಬಿ ವಶಕ್ಕೆ ಒಪ್ಪಿಸಿದೆ. ಇಷ್ಟಾದರೂ ಸುಮ್ಮನಿರದ ಖಾನ್ ಅವರ ಪಿಟಿಐ ಪಕ್ಷವು ಬುಧವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಇನ್ನು ನಿನ್ನೆ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆಯು ನಡೆದಿದ್ದು, ಪ್ರಧಾನಿ ರಾಷ್ಟ್ರ ಉದ್ದೇಶಿಸಿ ಮಾತನಾಡಿದ್ದಾರೆ. ಸಭೆಯಲ್ಲಿ ಪ್ರಧಾನಿ, ಇಮ್ರಾನ್ ಖಾನ್ ಬಂಧನ ವಿರೋಧಿಸಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಮತ್ತು ಖಾನ್ ಬೆಂಬಲಿಗರು ತೀವ್ರ ಪ್ರತಿಭಟನೆ ಅಲ್ಲದೇ ಹಿಂಸಾಚಾರ ಮುಂದುವರೆಸಿದ್ದಾರೆ. ಇದರಿಂದ ದೇಶದ ಅಶಾಂತಿ ಕೆಟ್ಟಿರುವುದಲ್ಲದೇ, ಖಾನ್ ಬೆಂಬಲಿಗರು ಅನೇಕ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಹಾನಿಗೊಳಿಸಿದಿದ್ದಾರೆ.
ಈ ಹಿಂಸಾಚಾರ ತಡೆಯಲು ರಾಜಧಾನಿಯಾದ ಇಸ್ಲಾಮಾಬಾದ್, ಪಂಜಾಬ್ನ ಜನನಿಬೀಡ ಪ್ರದೇಶದ, ವಾಯುವ್ಯದ ಅತ್ಯಂತ ಸೂಕ್ಷ್ಮ ಪ್ರಾಂತ್ಯಗಳಲ್ಲಿ ಮಿಲಿಟರಿ ನಿಯೋಜಿಸಲು ಸಭೆಯಲ್ಲಿ ಮನವಿ ಮಾಡಲಾಯಿತು. ಮಂಗಳವಾರ ಖಾನ್ ಬಂಧನದ ನಂತರ ಇಸ್ಲಾಮಾಬಾದ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಬೆಂಬಲಿಗರು ರಸ್ತೆ ತಡೆದರು, 14 ಸರ್ಕಾರಿ ಕಟ್ಟಡಗಳಿಗೆ ಮತ್ತು 21 ಪೊಲೀಸ್ ವಾಹನಗಳಿಗೆ ಹಾಗೂ ಸರ್ಕಾರಿ ನಿಯಂತ್ರಣದ ರೇಡಿಯೋ ಪಾಕಿಸ್ತಾನ ಕಟ್ಟಡಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.
ಅಲ್ಲದೇ ಬೆಂಬಲಿಗರ ಹಿಂಸಾತ್ಮಕ ಪ್ರತಿಭಟನೆಯಿಂದ ಪಾಕಿಸ್ತಾನ ಅಸೋಸಿಯೇಟೆಡ್ ಪ್ರೆಸ್ ಕಚೇರಿ ಧ್ವಂಸಗೊಂಡಿದೆ. ಇಂತಹ ಹಿಂಸಾಚಾರ ಪಾಕಿಸ್ತಾನ ಎಂದಿಗೂ ನೋಡಿರಲಿಲ್ಲ. ರೋಗಿಗಳಿದ್ದ ಆ್ಯಂಬುಲೆನ್ಸ್ಗಳಿಂದ ಅವರನ್ನು ಹೊರತೆಗದು ಆ್ಯಂಬುಲೆನ್ಸ್ಗೆ ಬೆಂಕಿ ಹಚ್ಚಲಾಯಿತು. ಈ ಹಿಂಸಾಚಾರವನ್ನು ಎಂದಿಗೂ ಕ್ಷಮಿಸಲಾರದು ಎಂದು ಕ್ಯಾಬಿನೆಟ್ ಸಭೆಯ ನಂತರ ಪ್ರಧಾನಿ ಹೇಳಿದರು. ಮುಂದುವರಿದು ನಮ್ಮ ಸೈನ್ಯವು ಇಲ್ಲಿವರೆಗೆ ತಾಳ್ಮೆಯಿಂದ ವರ್ತಿಸಿದೆ. ಆದರೆ, ಈ ಪ್ರತಿಭಟನೆ ಹಿಂಸಚಾರದ ಹೋರಾಟ ಮುಂದುವರಿದರೆ ಯಾರು ಮುಖ್ಯ ಕಾರಣರಾಗುತ್ತಾರೋ ಅವರ ಮೇಲೆ ಕಟ್ಟು ನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
ಪೂರ್ವ ಪಂಜಾಬ್ನ ಪ್ರಾಂತ್ಯದಲ್ಲಿ, ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ 157 ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲಿನ ಸ್ಥಳೀಯ ಸರ್ಕಾರ ಇದರಿಂದ ಹೆಚ್ಚಿನ ಸೇನೆಯನ್ನು ನಿಯೋಜಿಸುವಂತೆ ಕೇಳಿಕೊಂಡಿದ್ದಾರೆ. ಇನ್ನು ಪಿಟಿಐ ಪ್ರಧಾನ ಕಾರ್ಯದರ್ಶಿ ಅಸಾದ್ ಉಮರ್, ಉಪಾಧ್ಯಕ್ಷ ಶಾ ಮಹಮೂದ್ ಖೂರೇಷಿ, ಪಂಜಾಬ್ ಮಾಜಿ ಗವರ್ನರ್ ಉಮರ್ ಸರ್ಫರಾಜ್ ಚೀಮಾ ಅವರನ್ನು ಬುಧವಾರ ಬಂಧಿಸಲಾಗಿದೆ. ಜೊತೆಗೆ ಖಾನ್ 945 ಬೆಂಬಲಿಗರನ್ನು ಪೊಲೀಸರು ಮಂಗಳವಾರವೇ ಬಂಧಿಸಿದ್ದಾರೆ.
ಇದನ್ನು ಓದಿ:ಪಾಕಿಸ್ತಾನದಲ್ಲಿ ಅನಿರ್ದಿಷ್ಟಾವಧಿಗೆ ಇಂಟರ್ನೆಟ್ ಬಂದ್