ಟೆಲ್ ಅವೀವ್ : ದಕ್ಷಿಣ ಗಾಜಾದ ಖಾನ್ ಯೂನಿಸ್ ಪ್ರದೇಶದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಮತ್ತು ಫತಾಹ್ನ ಅಲ್-ಅಕ್ಸಾ ಹುತಾತ್ಮರ ಬ್ರಿಗೇಡ್ ಉಗ್ರರ ಗುಂಪುಗಳು ಹಮಾಸ್ನ ಮಿಲಿಟರಿ ವಿಭಾಗ ಅಲ್-ಖಾಸ್ಸಾಮ್ ಬ್ರಿಗೇಡ್ನೊಂದಿಗೆ ಕೈಜೋಡಿಸಿ ಇಸ್ರೇಲ್ ವಿರುದ್ಧ ಹೋರಾಡುತ್ತಿವೆ ಎಂಬ ವರದಿಗಳ ನಂತರ ಇಸ್ರೇಲ್ ಈ ಪ್ರದೇಶದಲ್ಲಿ ತನ್ನ ದಾಳಿಗಳಲ್ಲಿನ ತೀವ್ರತೆಯನ್ನು ಹೆಚ್ಚಿಸಿದೆ.
ದಕ್ಷಿಣ ಗಾಜಾದಲ್ಲಿ ಐಡಿಎಫ್ ಪ್ರಮುಖವಾದ ಪ್ರಗತಿ ಸಾಧಿಸಿದೆ ಮತ್ತು ಅನೇಕ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯದ ಮೂಲಗಳು ಐಎಎನ್ಎಸ್ಗೆ ತಿಳಿಸಿವೆ. ಇತರ ಫೆಲೆಸ್ತೀನ್ ಉಗ್ರಗಾಮಿ ಗುಂಪುಗಳ ಸೇರ್ಪಡೆಯು ಹಮಾಸ್ ನ ಯುದ್ಧ ಶಕ್ತಿಯನ್ನು ಹೆಚ್ಚಿಸಿದೆ. ಖಾನ್ ಯೂನಿಸ್ನಲ್ಲಿ ನಡೆಯುತ್ತಿರುವ ತೀವ್ರ ಹೋರಾಟದಲ್ಲಿ ಹಮಾಸ್ ಉಗ್ರರು ಟ್ಯಾಂಕ್ ವಿರೋಧಿ ಕ್ಷಿಪಣಿಗಳು, ರಾಕೆಟ್ ಚಾಲಿತ ಗ್ರೆನೇಡ್ಗಳು ಮತ್ತು ಮೋರ್ಟಾರ್ಗಳನ್ನು ಬಳಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುದ್ಧದಲ್ಲಿ ಹೊಸ ಉಗ್ರಗಾಮಿ ಗುಂಪುಗಳ ಸೇರ್ಪಡೆಯಿಂದ ಈ ಪ್ರದೇಶದಲ್ಲಿ ಮದ್ದುಗುಂಡುಗಳ ಬಲವನ್ನು ಹೆಚ್ಚಿಸಿದೆ ಎಂದು ಯುಎಸ್ ಮೂಲದ ಥಿಂಕ್ ಟ್ಯಾಂಕ್ ಆಗಿರುವ ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್ (ಐಎಸ್ಡಬ್ಲ್ಯೂ) ಮತ್ತು ಕ್ರಿಟಿಕಲ್ ಥ್ರೆಟ್ಸ್ ಪ್ರಾಜೆಕ್ಟ್ (ಸಿಟಿಪಿ) ಹೇಳಿದೆ. ಹಮಾಸ್ನ ಉನ್ನತ ನಾಯಕರಾದ ಮೊಹಮ್ಮದ್ ದೀಫ್ ಮತ್ತು ಯಾಹ್ಯಾ ಸಿನ್ವರ್ ಇಬ್ಬರೂ ಖಾನ್ ಯೂನಿಸ್ ಸುರಂಗ ಜಾಲದಲ್ಲಿ ಅಡಗಿದ್ದಾರೆ ಎಂದು ನಂಬಲಾಗಿದೆ.