ಕರ್ನಾಟಕ

karnataka

ETV Bharat / international

ಲಿಜ್ ಟ್ರಸ್ ರಾಜೀನಾಮೆ: ಯಾರಾಗ್ತಾರೆ ಬ್ರಿಟನ್‌ ಪ್ರಧಾನಿ?.. ಇನ್ನೂ ಏನನ್ನೂ ಹೇಳದ ರಿಷಿ!

ಲಿಜ್‌ ಟ್ರಸ್‌ ಅವರ ರಾಜೀನಾಮೆಯಿಂದಾಗಿ ಬ್ರಿಟನ್‌ನಲ್ಲಿ ಮತ್ತೊಂದು ಸುತ್ತಿನ ರಾಜಕೀಯ ವಿಪ್ಲವ ಆರಂಭವಾಗಿದೆ. ದೇಶಕ್ಕೆ ನೂತನ ಪ್ರಧಾನಿ ಆಯ್ಕೆ ಮಾಡಬೇಕಿದ್ದು, ಎಲ್ಲರ ಚಿತ್ತ ಭಾರತೀಯ ಮೂಲದ ರಿಷಿ ಸುನಕ್‌ ಅವರ ಮೇಲೆ ನೆಟ್ಟಿದೆ. ಆದರೆ ರಿಷಿ ಸುನಕ್‌ ಮತ್ತೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.

Rishi Sunak
ರಿಷಿ ಸುನಕ್

By

Published : Oct 21, 2022, 7:12 AM IST

ಲಂಡನ್:ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ಗುರುವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಸ್ಥಾನದ ಚುನಾವಣೆಯಲ್ಲಿ ಲಿಜ್‌ ಟ್ರಸ್‌ ವಿರುದ್ಧ ಪರಾಭವಗೊಂಡಿದ್ದ ಭಾರತ ಮೂಲದ ರಿಷಿ ಸುನಕ್‌ ಅವರಿಗೆ ಬ್ರಿಟನ್‌ ಪ್ರಧಾನಿಯಾಗಲು ಈ ಮೂಲಕ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.

ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೆ ಮತ್ತೊಮ್ಮೆ ಪೈಪೋಟಿ ನಡೆಸಲಿದ್ದಾರೆ ಎಂದು ವೆಸ್ಟ್‌ಮಿನ್‌ಸ್ಟರ್ ಮತ್ತು ವೈಟ್‌ಹಾಲ್‌ನಲ್ಲಿ ಊಹಾಪೋಹಗಳು ಹರಡಿವೆ. ಆದಾಗ್ಯೂ, ಅವರಿಂದ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅವನತಿಯಲ್ಲಿ ಸುನಕ್‌ ಅವರದ್ದೂ ಪಾತ್ರವಿದೆ ಎಂಬ ಅಪಖ್ಯಾತಿಯ ಹಿನ್ನೆಲೆ ಪಕ್ಷದೊಳಗೆ ಅವರಿಗೆ ಶತ್ರುಗಳು ಸೃಷ್ಟಿಯಾಗಿದ್ದಾರೆ. ಹೀಗಾಗಿ ಇದು ಅವರಿಗೆ ಹಿನ್ನಡೆಯಾಗುವ ಅಂಶ. ಇನ್ನೊಂದೆಡೆ, 6 ವಾರಗಳ ಹಿಂದಿನ ಚುನಾವಣೆಯಲ್ಲಿ ಸೋತ ನಂತರ ರಿಷಿ ವರ್ಚಸ್ಸಿಗೆ ತಕ್ಕಮಟ್ಟಿಗೆ ಹಾನಿಯಾಗಿದೆ ಎನ್ನಲಾಗಿದೆ.

ಸುನಕ್ ಅವರ ಹೊರತಾಗಿ, ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಹೌಸ್ ಆಫ್ ಕಾಮನ್ಸ್ ನಾಯಕ ಪೆನ್ನಿ ಮೊರ್ಡಾಂಟ್ ಹೆಸರೂ ಕೂಡ ಪ್ರಧಾನಿ ಸ್ಥಾನಕ್ಕೆ ಕೇಳಿ ಬಂದಿದೆ. ಜಾನ್ಸನ್ ಹೆಸರೂ ಪ್ರಸ್ತಾಪವಾಗುತ್ತಿದೆ. ಈ ಹಿಂದೆ ನಾಯಕತ್ವಕ್ಕಾಗಿ ಸ್ಪರ್ದೆ ಮಾಡಲು ವ್ಯಾಲೇಸ್ ನಿರಾಕರಿಸಿದ್ದರು. ಆದರೆ ಅವರು ಸ್ಪರ್ಧೆ ಮಾಡಿದರೆ, ಮುಂಚೂಣಿ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ:ಅತಿ ಕಡಿಮೆ ಅವಧಿಗೆ ಪ್ರಧಾನಿಯಾದ ಲಿಜ್ ಟ್ರಸ್: ಬ್ರಿಟನ್‌ಗೆ ಮೂರುವರೆ ತಿಂಗಳಲ್ಲಿ 3 ಪಿಎಂ!

ಬುಧವಾರ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್ ಕೂಡ ಮಹತ್ವಾಕಾಂಕ್ಷೆ ಹೊಂದಿರಬಹುದಾದ ಸಾಧ್ಯತೆಗಳಿವೆ ಎನ್ನಲಾಗಿದೆ. ಪ್ರಸ್ತುತ ಚಾನ್ಸೆಲರ್ ಆಗಿರುವ ಜೆರ್ಮಿ ಹಂಟ್ ಅವರು ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಇನ್ನೊಂದೆಡೆ, ಲಿಜ್‌ ಟ್ರಸ್‌ ರಾಜೀನಾಮೆ ಬೆನ್ನಿಗೆ #RishiSunak ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದು, ಅವರಿಗೆ ಮತ್ತೊಂದು ಅವಕಾಶ ಲಭ್ಯವಾಗಿದೆ ಎಂಬ ಅಭಿಪ್ರಾಯಗಳೇ ವ್ಯಕ್ತವಾಗಿವೆ.

ಇನ್ನು ಬ್ರಿಟಿಷ್ ಇತಿಹಾಸದಲ್ಲಿ ಮೊದಲ ಬಾರಿಗೆ, ಆನ್‌ಲೈನ್ ಮತದಾನದ ಮೂಲಕ ರಾಜಕೀಯ ಪಕ್ಷವೊಂದು ಪ್ರಧಾನಿಯನ್ನು ಆಯ್ಕೆ ಮಾಡಬಹುದು. ಇದು ಇಬ್ಬರು ಅಭ್ಯರ್ಥಿಗಳ ನಡುವಿನ ಸ್ಪರ್ಧೆಯಿದ್ದಾಗ ಮಾತ್ರ ಸಂಭವಿಸುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸದರು ಒಮ್ಮತದ ಅಭ್ಯರ್ಥಿಯನ್ನು ನಿರ್ಧರಿಸಿದರೆ ಆನ್‌ಲೈನ್ ಮತಕ್ಕೆ ಅವಕಾಶ ಇರುವುದಿಲ್ಲ.

ಕನ್ಸರ್ವೇಟ್ ಸಂಸದೀಯ ಪಕ್ಷವು ಅಭ್ಯರ್ಥಿಯು ಸ್ಪರ್ಧಿಸಲು ಅರ್ಹತೆ ಪಡೆಯಲು ಹೆಚ್ಚಿನ ಪಟ್ಟಿಯನ್ನು ನಿಗದಿಪಡಿಸಿದೆ. ಹೌಸ್ ಆಫ್ ಕಾಮನ್ಸ್‌ನಲ್ಲಿ ಕನ್ಸರ್ವೇಟಿವ್ ಎಂಪಿಗಳ ಸಂಖ್ಯೆ ಅಂದಾಜು 357ಯಿದ್ದು, ಅವರು ಕನಿಷ್ಠ 100 ಸಂಸದರ ಬೆಂಬಲ ಪಡೆಯುವುದು ಅಗತ್ಯ.

ಬ್ರಿಟನ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಲಿಜ್‌ ಟ್ರಸ್‌, ಅತ್ಯಂತ ಕಡಿಮೆ ಅವಧಿ(45 ದಿನಗಳು)ಯವರೆಗೆ ದೇಶವನ್ನು ಆಳಿದ ಮೊದಲ ಪ್ರಧಾನಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಆರ್ಥಿಕ ಹಿಂಜರಿಕೆಯ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿರುವ ಕಾರಣಕ್ಕೆ, ಬ್ರಿಟನ್‌ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಲಿಜ್‌ ಟ್ರಸ್‌ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಕ್ಕೆ ಬಂದ ಬಳಿಕವೂ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ. ಸಚಿವೆಯಾಗಿದ್ದಾಗ ಟ್ರಸ್‌ ಅವರ ಆಪ್ತರಾಗಿದ್ದ ಕ್ಯಾಸಿ ಕ್ವಾರ್ಟೆಂಗ್‌ರನ್ನು ಹುದ್ದೆಯಿಂದ ತೆಗೆದುಹಾಕಿದ್ದಕ್ಕೆ ಸಂಸದರು ಟ್ರಸ್‌ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು. ಆರ್ಥಿಕತೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಟ್ರಸ್‌ ಕೈಗೊಂಡ ಹಠಾತ್‌ ನಿರ್ಧಾರಗಳಿಗೆ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

ರಿಷಿ ಸುನಕ್​ಗೆ ಮತ್ತೊಂದು ಅವಕಾಶ:ಪ್ರಧಾನಿ ಹುದ್ದೆಯನ್ನು ಏರುವ ಮೊದಲು ಲಿಜ್‌ ಟ್ರಸ್‌ ಹಲವು ಅಶ್ವಾಸನೆ ನೀಡಿದ್ದರು. ಆದರೆ ಅಧಿಕಾರಕ್ಕೆ ಏರಿದ ಬಳಿಕ ಟ್ರಸ್ಟ್‌ ಉಲ್ಟಾ ಹೊಡೆದ ಹಿನ್ನೆಲೆಯಲ್ಲಿ ರಿಷಿ ಸುನಾಕ್ ಈಗ ಬುಕ್ಕಿಗಳ ಫೇವರಿಟ್ ಆಗಿದ್ದಾರೆ.

ಬ್ರಿಟನ್‌ ನೂತನ ಪ್ರಧಾನಿ ಆಯ್ಕೆಗಾಗಿ ಮತ್ತೆ ಚುನಾವಣೆ ನಡೆದರೆ ಅಥವಾ ಸರ್ವಸಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ರಿಷಿ ಸುನಕ್‌ ಅವರ ಪರ ಕನ್ಸರ್ವೇಟಿವ್‌ ಪಕ್ಷದ ಬಹುತೇಕ ಸದಸ್ಯರು ನಿಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇವೆಲ್ಲಾ ಕೇವಲ ಆರಂಭಿಕ ಅನಿಸಿಕೆಗಳಾಗಿದ್ದು, ಈ ಕುರಿತು ಸ್ಪಷ್ಟ ಚಿತ್ರಣ ಹೊರಬರಲು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಿದೆ.

ಶತಮಾನಗಳ ಕಾಲ ಸ್ಥಿರ ಆರ್ಥಿಕತೆ ಹೊಂದಿರುವ ರಾಷ್ಟ್ರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಬ್ರಿಟನ್‌, 2008ರಲ್ಲಿ ಎದುರಾದ ಆರ್ಥಿಕ ಹಿಂಜರಿತದ ಹೊಡೆತದಿಂದ ತತ್ತರಿಸಿದೆ. 2008ರಲ್ಲಿ ಆರಂಭವಾದ ಆರ್ಥಿಕ ಹಿಂಜರಿತ ಮೇಲ್ನೋಟಕ್ಕೆ 5 ತ್ರೈಮಾಸಿಕಗಳಲ್ಲಿ ಮುಕ್ತಾಯಗೊಂಡಿತಾದರೂ, ಅದರ ದೀರ್ಘಕಾಲೀನ ಪರಿಣಾಮಗಳು ಯುರೋಪ್‌ನ ಅತಿ ಸದೃಢ ಆರ್ಥಿಕತೆಯ ದೇಶ ಎಂದೇ ಹೆಸರಾದ ಬ್ರಿಟನ್‌ ಮೇಲೆ ಗಾಢ ಪರಿಣಾಮ ಬೀರಿರುವುದು ಸುಳ್ಳಲ್ಲ.

ಲಿಜ್ ಟ್ರಸ್ ವಿರುದ್ಧ ಸೋಲು:ಬ್ರಿಟನ್‌ನ ಬೋರಿಸ್ ಜಾನ್ಸನ್ ಅವರ ರಾಜೀನಾಮೆಯ ನಂತರ ರಿಷಿ ಸುನಕ್​​ ಕೂಡ ಲಿಜ್ ಟ್ರಸ್ ಅವರೊಂದಿಗೆ ಬ್ರಿಟನ್‌ನ ಪ್ರಧಾನಿ ರೇಸ್‌ನಲ್ಲಿ ಭಾಗಿಯಾಗಿದ್ದರು. ಆದರೆ ಟೋರಿ ನಾಯಕತ್ವದ ಫೈಟ್​​ನಲ್ಲಿ ಅವರು ಲಿಜ್ ಟ್ರಸ್​​ ವಿರುದ್ಧ ಸೋತರು. ಚುನಾವಣೆಯಲ್ಲಿ ಟ್ರಸ್ 81,326 ಮತಗಳನ್ನು ಅಂದರೆ ಶೇ.57 ರಷ್ಟು ಮತಗಳನ್ನು ಪಡೆದು ಜಯ ತಮ್ಮದಾಗಿಸಿಕೊಂಡರು, ಸುನಕ್ 60,399 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಇದನ್ನೂ ಓದಿ:ಬ್ರಿಟನ್​ ಪ್ರಧಾನಿ ಲಿಜ್ ಟ್ರಸ್ ದಿಢೀರ್​ ರಾಜೀನಾಮೆ: ರಿಷಿ ಸುನಕ್​ಗೆ ಚಾನ್ಸ್​?

ABOUT THE AUTHOR

...view details