ವಾಷಿಂಗ್ಟನ್: ಕೋವಿಡ್ ನಂತರ ಅತಿ ಹೆಚ್ಚು ಭಯ ಹುಟ್ಟಿಸುತ್ತಿರುವ ಮತ್ತೊಂದು ರೋಗ ಎಂದರೆ ಅದು ಝಿಕಾ ವೈರಸ್. ಸೊಳ್ಳೆಗಳಿಂದ ಹರಡುವ ಇದು ಕಳೆದ ತಿಂಗಳು ಕೇರಳ ಮತ್ತು ಕರ್ನಾಟದಲ್ಲೂ ಪತ್ತೆಯಾಗಿತ್ತು. ಇದೀಗ ಈ ವೈರಾಣುವಿಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ವೊಂದು ಸಿಕ್ಕಿದೆ.
ಝಿಕಾ ವೈರಸ್‌ನಿಂದ ಜನರನ್ನು ರಕ್ಷಿಸಲು ಆಸ್ಟ್ರೇಲಿಯಾದ ವಿಜ್ಞಾನಿಗಳು ವಿಶೇಷ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ ಇದನ್ನೂ ಸಿರೆಂಜ್ (ಸೂಜಿ ಮುಕ್ತ ಲಸಿಕೆ) ಇಲ್ಲದೆಯೇ ದೇಹಕ್ಕೆ ಸೇರಿಸಬಹುದಾಗಿದೆ. ಅಡಿಲೇಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಪ್ರಾಯೋಗಿಕ ಲಸಿಕೆಯನ್ನು ಇಲಿಗಳಿಗೆ ನೀಡಿದ್ದು, ಝಿಕಾ ವೈರಸ್‌ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ತಿಳಿದು ಬಂದಿದೆ.
ಭಾರತ, ಆಗ್ನೇಯ ಏಷ್ಯಾ, ಪೆಸಿಫಿಕ್, ಆಫ್ರಿಕಾ, ದಕ್ಷಿಣ ಮತ್ತು ಮಧ್ಯ ಅಮೆರಿಕದಲ್ಲಿ ಝಿಕಾ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ. ಈ ವೈರಸ್ ಬಂದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಗರ್ಭಿಣಿ ಮಹಿಳೆಯರಲ್ಲಿ ಈ ಸೋಂಕು ಪತ್ತೆಯಾದರೆ ಭ್ರೂಣದಲ್ಲಿ ಮಗುವಿನ ಸಾವು ಸಂಭವಿಸಬಹುದು ಅಥವಾ ಅನಾರೋಗ್ಯದ ಮಗುವಿನ ಜನನವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟಲೆಂದು, ವಿಜ್ಞಾನಿಗಳು ಹೆಚ್ಚಿನ ಸಾಂದ್ರತೆಯ ಮೈಕ್ರೋ ಅರೇ ಪ್ಯಾಚ್ (HD-MAP)ಗಳನ್ನು ಬಳಸಿಕೊಂಡು ಲಸಿಕೆಯ ಮಾದರಿ ಅಭಿವೃದ್ಧಿಪಡಿಸಿದ್ದಾರೆ.
ಈ ಲಸಿಕೆ ನೆರವಿನಿಂದ ಝಿಕಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸಬಹುದಾಗಿದೆ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ದನಸುಖ ವಿಜೇಸುಂದರ ಹೇಳಿದರು. ಲಸಿಕೆ ತುಂಬಾ ಪರಿಣಾಮಕಾರಿ ಮತ್ತು ದೇಹಕ್ಕೆ ಕಳುಹಿಸಲು ತುಂಬ ಸುಲಭವಾಗಿದೆ. ಚರ್ಮದ ಮೇಲ್ಮೈ ಕೆಳಗಿರುವ ಪ್ರತಿರಕ್ಷಣಾ ಕೋಶಗಳಿಗೆ ಈ ಲಸಿಕೆಯನ್ನು ನೇರವಾಗಿ ತಲುಪಿಸುವುದಾಗಿದೆ ಎಂದು ತಿಳಿಸಿದ್ದಾರೆ.