ಬೀಜಿಂಗ್(ಚೀನಾ):ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಆಪೋಶನ ಪಡೆದಿರುವ ಕೋವಿಡ್ 19 ವೈರಸ್ ಚೀನಾದಿಂದ ಹರಡಿರುವುದು ಗೊತ್ತೇ ಇದೆ. ಈ ಮಹಾಮಾರಿ ಸೃಷ್ಟಿಸಿದ ದುರಂತದಿಂದ ಚೇತರಿಸಿಕೊಳ್ಳುತ್ತಿರುವ ದೇಶಕ್ಕೆ ಮತ್ತೊಂದು ಮಾರಕ ರೋಗಬಾಧೆ ಕಾಡುತ್ತಿದೆಯೇ ಎಂಬು ಅನುಮಾನ ಮೂಡಿದೆ. ಶಾಲೆಗೆ ಹೋಗುವ ಅನೇಕ ಮಕ್ಕಳು ನ್ಯುಮೋನಿಯಾದ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಪ್ರಪಂಚಾದ್ಯಂತ ಹರಡುವ ರೋಗಗಳ ಬಗ್ಗೆ ನಿಗಾ ವಹಿಸುವ ಪ್ರೊಮೆಡ್ ಸಂಸ್ಥೆಯು ಈ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಬೀಜಿಂಗ್ ಮತ್ತು ಲಿಯಾನಿಂಗ್ ಪ್ರದೇಶಗಳಲ್ಲಿನ ಆಸ್ಪತ್ರೆಗಳು ಬುಧವಾರ ಬೆಳಿಗ್ಗೆ ಮಕ್ಕಳಿಂದ ತುಂಬಿದ್ದವು. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆ, ಜ್ವರ ಮುಂತಾದ ಲಕ್ಷಣಗಳಿರುವ ಮಕ್ಕಳನ್ನು ದಾಖಲಿಸಲಾಗಿತ್ತು. ಶಂಕಿತ ನ್ಯುಮೋನಿಯಾ ಹರಡುವಿಕೆ ತಡೆಯಲು ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ ಎಂದು ಪ್ರೊಮೆಡ್ ಕಂಪನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ನೂರಾರು ಮಕ್ಕಳು ಏಕಕಾಲದಲ್ಲಿ ಅಸ್ವಸ್ಥರಾಗುವುದು ಅಸಹಜ ಬೆಳವಣಿಗೆ ಎಂದು ಹೇಳಲಾಗಿದ್ದು, ಈ ರೋಗ ಯಾವಾಗ ಮತ್ತು ಹೇಗೆ ಹುಟ್ಟಿಕೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಸೋಂಕಿನಿಂದ ಹಲವು ಶಿಕ್ಷಕರೂ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಇದು ಕೊರೊನಾದಂತಹ ಮತ್ತೊಂದು ಸಾಂಕ್ರಾಮಿಕವಾಗುವ ಸಾಧ್ಯತೆಯ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದು ಎಂದು ಪ್ರೊಮೆಡ್ ಪ್ರತಿನಿಧಿಗಳು ಹೇಳಿದ್ದಾರೆ.