ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮಹಿಳೆಯರ ಮೇಲೆ ದಿನಕ್ಕೊಂದು ನಿರ್ಬಂಧ ಹೇರುತ್ತಿದ್ದು, ಮಹಿಳಾ ಟಿವಿ ಆ್ಯಂಕರ್ಗಳಿಗೆ ಬುರ್ಖಾ ಕಡ್ಡಾಯ ಮಾಡಿದೆ. ಇದನ್ನು ವಿರೋಧಿಸಿ ಇದೀಗ ಪುರುಷ ಆ್ಯಂಕರ್ಗಳು ಕೂಡ ಮಾಸ್ಕ್ ಧರಿಸಿ ಸುದ್ದಿ ವಾಚನ ಮಾಡಿದ್ದಾರೆ. ತಾಲಿಬಾನ್ ಮುಖ್ಯಸ್ಥರು ಕೆಲ ದಿನಗಳ ಹಿಂದಷ್ಟೇ ಮಹಿಳೆಯರಿಗೆ ಸಾರ್ವಜನಿಕವಾಗಿ ಬುರ್ಖಾ ಕಡ್ಡಾಯ ಮಾಡಿ ಆದೇಶಿಸಿದ್ದರು. ಇದನ್ನು ಟಿವಿ ಆ್ಯಂಕರ್ಗಳೂ ಕೂಡ ಪಾಲನೆ ಮಾಡಬೇಕು ಎಂದೂ ಆದೇಶಿಸಿದ್ದಾರೆ. ಇದರಿಂದ ಆ್ಯಂಕರ್ಗಳು ಕೂಡ ಬುರ್ಖಾ ಧರಿಸಿ ಸುದ್ದಿ ಓದಿದ್ದಾರೆ.
ತಾಲಿಬಾನ್ನ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಟಿವಿಯಲ್ಲಿ ಸುದ್ದಿ ಓದುವಾಗ ಬುರ್ಖಾ ಧರಿಸಲು ಸಾಧ್ಯವಿಲ್ಲ ಎಂದು ಮಹಿಳಾ ಆ್ಯಂಕರ್ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಕಿಡಿಕಾರಿದ ತಾಲಿಬಾನ್ ಮುಖ್ಯಸ್ಥ ಅಂತಹವರನ್ನು ಕೆಲಸದಿಂದ ವಜಾ ಮಾಡಲು ಆದೇಶಿಸಿದ್ದಾರೆ.
ಮಹಿಳೆಯರಿಗೆ ಪುರುಷರ ಬೆಂಬಲ:ಇನ್ನು ಈ ನಿರ್ಬಂಧದ ವಿರುದ್ಧ ಪುರುಷ ನಿರೂಪಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದರ ವಿರುದ್ಧ ತಾವು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸುದ್ದಿಯನ್ನು ವಾಚನ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಾಲಿಬಾನ್ನ ಈ ನಿರ್ಬಂಧದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. #Freeherface ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಸೃಷ್ಟಿಸಿದೆ.