ಲಂಡನ್ :ಮನೆಯಲ್ಲಿ ಸಾಕಿದ ನಾಯಿ ಏಳು ಮರಿಗಳಿಗೆ ಜನ್ಮ ನೀಡಿದೆ ಎಂಬ ಕಾರಣಕ್ಕೆ ಅದನ್ನು ಸರಪಳಿಯಿಂದ ಕಟ್ಟಿಹಾಕಿ ಊಟ ನೀಡದೇ ಉಪವಾಸ ಬೀಳಿಸಿದ ಆರೋಪದ ಮೇಲೆ ಸೆಂಟ್ರಲ್ ಇಂಗ್ಲೆಂಡ್ನಲ್ಲಿನ ಭಾರತೀಯ ಮೂಲದ ವ್ಯಕ್ತಿಗೆ 8 ವಾರ ಜೈಲು ಶಿಕ್ಷೆ ಮತ್ತು ಸಂಬಳವಿಲ್ಲದೇ 80 ಗಂಟೆಗಳ ಕಾಲ ಕೆಲಸ ಮಾಡುವ ಶಿಕ್ಷೆ ನೀಡಲಾಗಿದೆ. 41 ವರ್ಷದ ಗುರ್ಮಿಂದರ್ ಸಿಂಗ್ ಎಂಬಾತ ಪ್ರಾಣಿ ಕಲ್ಯಾಣ ಕಾಯ್ದೆಯಡಿ ತಾನು ಮಾಡಿದ ಅಪರಾಧ ಒಪ್ಪಿಕೊಂಡ ನಂತರ ಆತನಿಗೆ ಶಿಕ್ಷೆ ವಿಧಿಸಲಾಗಿದೆ. ಇನ್ನು ಮುಂದೆ 2 ವರ್ಷಗಳ ಕಾಲ ಆತ ಯಾವುದೇ ನಾಯಿಯನ್ನು ಸಾಕುವಂತಿಲ್ಲ ಎಂದೂ ಕೋರ್ಟ್ ಆದೇಶಿಸಿದೆ.
ಇಂಗ್ಲೆಂಡ್ನಲ್ಲಿರುವ ಪ್ರಾಣಿ ಕಲ್ಯಾಣ ಚಾರಿಟಿಯಾದ ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ (RSPCA) ಸಂಸ್ಥೆಯ ಇನ್ಸ್‌ಪೆಕ್ಟರ್ ಅವರು ಅಕ್ಟೋಬರ್ 12, 2022 ರಂದು ಸಿಂಗ್ ಅವರ ಮನೆಗೆ ಭೇಟಿ ನೀಡಿ ನೀಡಿ ನಾಯಿಯ ಪರಿಸ್ಥಿತಿ ಪರಿಶೀಲಿಸಿದ್ದಾರೆ ಎಂದು ಕೋವೆಂಟ್ರಿಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಲಾಯಿತು.
ಸಾಶಾ ಹೆಸರಿನ ಪ್ರೆಸ್ಸಾ ಕೆನಾರಿಯೊ ತಳಿಯ ನಾಯಿಯನ್ನು ಲೋಹದ ಸರಪಳಿಯಿಂದ ಫ್ರಿಜ್ಗೆ ಕಟ್ಟಿಹಾಕಿದ್ದು ಹಾಗೂ ಅದಕ್ಕೆ ಊಟ ನೀಡದ್ದರಿಂದ ಅದು ಸಣಕಲಾಗಿ ಸಾಯುವ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಸುಮಾರು ಮೂರು ವಾರಗಳ ವಯಸ್ಸಿನ ಅದರ ಏಳು ಎಳೆ ನಾಯಿಮರಿಗಳನ್ನು ತುಕ್ಕು ಹಿಡಿದ ಲೋಹದ ಪೆಟ್ಟಿಗೆಯಲ್ಲಿ ಅದರ ಹತ್ತಿರ ಇರಿಸಲಾಗಿತ್ತು.
ಆರ್‌ಎಸ್‌ಪಿಸಿಎ ಇನ್ಸ್‌ಪೆಕ್ಟರ್ ಅವರು ಸಾಶಾ ಮತ್ತು ಅದರ ನಾಯಿಮರಿಗಳನ್ನು ಚಾರಿಟಿಯ ಬರ್ಮಿಂಗ್‌ಹ್ಯಾಮ್ ಅನಿಮಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅದರ ತೂಕ ಕಡಿಮೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ಅದನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಸಾಶಾ ನಾಯಿಯ ತೂಕ ಕೇವಲ 25.7 ಕೆಜಿ ಇರುವುದು ಕಂಡು ಬಂದಿದೆ. ಆದರೆ, ಸಾಮಾನ್ಯವಾಗಿ ಆ ತಳಿಯ ನಾಯಿಯ ತೂಕ ಸರಾಸರಿ 40 ಕೆಜಿ ಆಗಿರುತ್ತದೆ ಎಂದು ಪಶು ವೈದ್ಯರು ಹೇಳಿದ್ದಾರೆ.
ಆರ್‌ಎಸ್‌ಪಿಸಿಎ ಆರೈಕೆಯಲ್ಲಿದ್ದ ಒಂದು ತಿಂಗಳೊಳಗೆ ಸಾಶಾ 6 ಕೆಜಿ ತೂಕ ಹೆಚ್ಚಿಸಿಕೊಂಡಿರುವುದನ್ನು ನ್ಯಾಯಾಲಯ ಗಮನಿಸಿದೆ. ವಿಚಾರಣೆಯ ವೇಳೆ, ತಾನು ಕೆಟ್ಟ ಮನುಷ್ಯನಲ್ಲ ಎಂದು ವಾದಿಸಿದ ಸಿಂಗ್, ತನ್ನ ಫ್ರಿಜ್ನಲ್ಲಿ 222 ಪೌಂಡ್ ಮೌಲ್ಯದ ನಾಯಿ ಆಹಾರ ಇತ್ತು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನೀವು ನಿಮ್ಮ ಜವಾಬ್ದಾರಿ ತಿಳಿದುಕೊಳ್ಳುತ್ತಿಲ್ಲ. ನಿಮಗೆ ಯಾವುದೇ ಪಶ್ಚಾತ್ತಾಪವಾಗಿರುವಂತೆ ಕಾಣಿಸುತ್ತಿಲ್ಲ. ನನ್ನ ಮುಂದೆ ಇರುವ ಸಾಕ್ಷಿಗಳ ಆಧಾರದ ಮೇಲೆ ನಾನು ನಿಮ್ಮನ್ನು ಶಿಕ್ಷಿಸಬೇಕಾಗಿದೆ. ಇಂದು ನೀವು ಮಾಡಿದ್ದಕ್ಕೆ ನಿಮ್ಮನ್ನು ಜೈಲಿಗೆ ಕಳುಹಿಸಬಹುದಿತ್ತು. ಆದರೂ ಹಾಗೆ ಮಾಡುತ್ತಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದರು.
ಸದ್ಯ ನ್ಯಾಯಾಲಯವು ಸಿಂಗ್ಗೆ ನೀಡಲಾದ ಎಂಟು ವಾರಗಳ ಜೈಲು ಶಿಕ್ಷೆಯನ್ನು ಈಗ 12 ತಿಂಗಳವರೆಗೆ ಅಮಾನತಿನಲ್ಲಿ ಇರಿಸಿದೆ. ನ್ಯಾಯಾಲಯದ ವೆಚ್ಚವಾಗಿ 400 ಪೌಂಡ್ ಮತ್ತು ನಾಯಿಗೆ ತೊಂದರೆ ನೀಡಿದ್ದಕ್ಕೆ 128 ಪೌಂಡ್ ದಂಡ ವಿಧಿಸಲಾಗಿದೆ. ಏಳು ನಾಯಿಮರಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಸಾಶಾಳಗೆ ಈಗ ಫ್ಲೋರಾ ಎಂದು ಮರುನಾಮಕರಣ ಮಾಡಲಾಗಿದೆ.
ಇದನ್ನೂ ಓದಿ : ಮೊದಲ ಸ್ಥಾನದಲ್ಲಿ ವಿಶ್ವದ ಮೋಸ್ಟ್ ವಾಂಟೆಡ್ ಕಾರು Tesla: 2ನೇ ಸ್ಥಾನದಲ್ಲಿ JEEP