ಕರ್ನಾಟಕ

karnataka

ETV Bharat / international

3 ತಿಂಗಳ ವಿರಾಮದ ನಂತರ ಮತ್ತೆ ಸ್ಫೋಟಗೊಳ್ಳಲು ಪ್ರಾರಂಭಿಸಿದ ಕಿಲೌಯಾ ಜ್ವಾಲಾಮುಖಿ! - most active volcanoes in the world

ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಕಿಲೌಯಾ ಜ್ವಾಲಾಮುಖಿಯು ಮೂರು ತಿಂಗಳ ವಿರಾಮದ ನಂತರ ಇದೀಗ ಮತ್ತೆ ಸ್ಫೋಟಗೊಳ್ಳಲು ಪ್ರಾರಂಭಿಸಿದೆ.

kilauea volcanoes
ಕಿಲೌಯಾ ಜ್ವಾಲಾಮುಖಿ

By

Published : Jun 8, 2023, 8:52 AM IST

ಹೊನೊಲುಲು( ಹವಾಯ್​- ಯುಎಸ್): ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿರುವ ಕಿಲೌಯಾವು ಬುಧವಾರದಿಂದ ಸ್ಫೋಟಗೊಳ್ಳಲು ಪ್ರಾರಂಭಿಸಿದೆ. ದೊಡ್ಡ ದ್ವೀಪದಲ್ಲಿ ಹೊಳೆಯುವ ಅದ್ಭುತವಾದ ಲಾವಾದ ಕಾರಂಜಿಗಳನ್ನು ಸೃಷ್ಟಿಸುತ್ತಿದೆ.

ಅಮೆರಿಕ​ ಜಿಯೋಲಾಜಿಕಲ್ ಸರ್ವೇಯ ಹವಾಯಿಯನ್ ಜ್ವಾಲಾಮುಖಿ ವೀಕ್ಷಣಾಲಯವು ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕಿಲೌಯೆಯ ಶಿಖರದಿಂದ ಬುಧವಾರ ಬೆಳಗಿನ ಜಾವ ಜ್ವಾಲಾಮುಖಿ ಮತ್ತೆ ಸ್ಫೋಟಗೊಂಡಿದೆ, ಶಿಖರ ಕ್ಯಾಲ್ಡೆರಾದಲ್ಲಿನ ಹಲೇಮೌ ಕುಳಿಯೊಳಗೆ ಸ್ಫೋಟ ಸಂಭವಿಸುತ್ತಿದೆ ಎಂದು ತಿಳಿಸಿದೆ. ಜೊತೆಗೆ, ಕುಳಿ ನೆಲದ ಮೇಲ್ಮೈಯಲ್ಲಿ ಲಾವಾ ಹರಿಯುತ್ತಿರುವ ಮತ್ತು ಅಲ್ಲಿ ಬಿರುಕು ಬಿಟ್ಟಿರುವ ಫೋಟೋಗಳನ್ನು ವೀಕ್ಷಣಾಲಯವು ಹಂಚಿಕೊಂಡಿದೆ.

"ಮುಂಜಾನೆ ಲಾವಾ ಹೊರಚಿಮ್ಮಿದ್ದು, ಇದು ಶಿಖರ ಕ್ಯಾಲ್ಡೆರಾ ಒಳಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಯಾವುದೇ ಮನೆಗಳಿಗೆ ಅಥವಾ ಮೂಲಸೌಕರ್ಯಗಳಿಗೆ ತೊಂದರೆಯಿಲ್ಲ. ಹವಾಯಿ ಜ್ವಾಲಾಮುಖಿಗಳ ರಾಷ್ಟ್ರೀಯ ಉದ್ಯಾನದ ಮುಚ್ಚಿದ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದೆ" ಎಂದು ರಾಷ್ಟ್ರೀಯ ಉದ್ಯಾನವನದ ವಕ್ತಾರ ಜೆಸ್ಸಿಕಾ ಫೆರಾಕೇನ್ ಹೇಳಿದ್ದಾರೆ.

ಇದನ್ನೂ ಓದಿ :ಭಯಂಕರ ವಿಡಿಯೋ... ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟ: ಜನರನ್ನು ಸ್ಥಳಾಂತರಿಸಿದ ಸ್ಪೇನ್‌ ಸಿವಿಲ್ ಗಾರ್ಡ್

"ನಿನ್ನೆ ಮುಂಜಾನೆ ಸುಮಾರು 4:30 ಗಂಟೆಗೆ 150 ಅಡಿ (46 ಮೀಟರ್) ಎತ್ತರದ ಕಾರಂಜಿಗಳನ್ನು ನೋಡಲು ಸಾಧ್ಯವಾಯಿತು. ನಾನು ಸುಮಾರು 15 ಕಾರಂಜಿಗಳನ್ನು ನೋಡಿದೆ" ಎಂದು ಉದ್ಯಾನದ ಸ್ವಯಂಸೇವಕ ಛಾಯಾಗ್ರಾಹಕ ಜಾನಿಸ್ ವೀ ಹೇಳಿದ್ದಾರೆ.

ಹವಾಯಿಯ ಎರಡನೇ ಅತಿದೊಡ್ಡ ಜ್ವಾಲಾಮುಖಿಯಾದ ಕಿಲೌಯಾ ಸೆಪ್ಟೆಂಬರ್ 2021 ರಿಂದ ಕಳೆದ ಡಿಸೆಂಬರ್‌ವರೆಗೆ ಸ್ಫೋಟಿಸಿತ್ತು. ಡಿಸೆಂಬರ್‌ನಲ್ಲಿ ಸುಮಾರು ಎರಡು ವಾರಗಳ ಕಾಲ ಹವಾಯಿಯ ದೊಡ್ಡ ಜ್ವಾಲಾಮುಖಿ ಮೌನಾ ಲೋವಾ ಕೂಡ ಹವಾಯಿಯ ಬಿಗ್ ಐಲ್ಯಾಂಡ್‌ನಲ್ಲಿ ಸ್ಫೋಟಿಸಿತ್ತು. ಸ್ವಲ್ಪ ವಿರಾಮದ ನಂತರ ಕಿಲೌಯಾ ಜನವರಿಯಲ್ಲಿ ಮತ್ತೆ ಸ್ಫೋಟಗೊಳ್ಳಲು ಪ್ರಾರಂಭಿಸಿತು. ಆ ಸ್ಫೋಟವು 61 ದಿನಗಳವರೆಗೆ ನಡೆದು ಮಾರ್ಚ್‌ನಲ್ಲಿ ಕೊನೆಗೊಂಡಿತು. ಇದೀಗ ಮತ್ತೆ ಜ್ವಾಲಾಮುಖಿ ಸ್ಫೋಟಗೊಳ್ಳಲು ಪ್ರಾರಂಭಿಸಿದೆ.

ಇದನ್ನೂ ಓದಿ :ಐಸ್‌ಲ್ಯಾಂಡ್‌ನ ಮೌಂಟ್ ಫಾಗ್ರಾಡಾಲ್ಸ್‌ಫ್ಜಾಲ್ ಬಳಿಯ ಕಣಿವೆಯಲ್ಲಿ ಉಕ್ಕಿ ಹರಿಯುತ್ತಿರುವ ಲಾವಾ ರಸ

ಹಿಂದಿನ ಘಟನೆ: ಇನ್ನು ಕಳೆದ ಮಾರ್ಚ್​ ತಿಂಗಳ ಎರಡನೇ ವಾರ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ಮೌಂಟ್ ಮೆರಾಪಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಪರಿಣಾಮ ದಟ್ಟವಾದ ಹೊಗೆ ಮತ್ತು ಬೂದಿ ಹೊರ ಚಿಮ್ಮಿದ್ದು, ಅಕ್ಕಪಕ್ಕದ ಹಳ್ಳಿಗಳನ್ನು ಅವರಿಸಿತ್ತು. ಬೂದಿಯು ಶಿಖರದಿಂದ ಸುಮಾರು 9,600 ಅಡಿ (3,000 ಮೀಟರ್) ಎತ್ತರ ಹಾರಿರುವ ಸಾಧ್ಯತೆಯನ್ನು ಮೆರಾಪಿ ಜ್ವಾಲಾಮುಖಿ ವೀಕ್ಷಣಾಲಯ ಅಂದಾಜಿಸಿತ್ತು. ಜೊತೆಗೆ, ಮೆರಾಪಿ ಜ್ವಾಲಾಮುಖಿಯ ಬಿಸಿ ಬೂದಿ, ಕಲ್ಲು, ಲಾವಾ ಮತ್ತು ಅನಿಲದ ಮಿಶ್ರಣವು ಇಳಿಜಾರು ಪ್ರದೇಶಗಳಲ್ಲಿ 7 ಕಿಲೋಮೀಟರ್ (4.3 ಮೈಲಿಗಳು) ವರೆಗೆ ಹರಿದು ಬಂದಿತ್ತು.

ಇದನ್ನೂ ಓದಿ :ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಇಂಥ ಭೀಕರ ದೃಶ್ಯ ಎಂದಾದರೂ ನೋಡಿದ್ದೀರಾ!

ABOUT THE AUTHOR

...view details