ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್(73) ಗುರುವಾರ ನಿಧನರಾದರು. ಮ್ಯಾನ್‌ಹಟನ್ ಟೌನ್‌ಹೌಸ್‌ನಲ್ಲಿ ಮಧ್ಯಾಹ್ನ 12:40ಕ್ಕೆ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇವಾನಾ ಟ್ರಂಪ್ ನಿಧನದ ಬಗ್ಗೆ ಸ್ವತಃ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ. ಟ್ರಂಪ್ ಟವರ್ ಸೇರಿದಂತೆ ಅವರ ಅನೇಕ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಇವಾನಾ ತನ್ನ ಪತಿಗೆ ಸಾಥ್ ನೀಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಸ್ಟೇಟಸ್ ಹಂಚಿಕೊಂಡಿರುವ ಟ್ರಂಪ್, 'ಆಕೆ ಸುಂದರ ಮತ್ತು ಅದ್ಭುತ ಮಹಿಳೆ. ಸ್ಪೂರ್ತಿದಾಯಕ ಜೀವನವನ್ನು ನಡೆಸಿದಳು.ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ.
ಇವಾನಾ ಹಿನ್ನೆಲೆ:ಇವಾನಾ 1946ರಲ್ಲಿ ಜೆಕೊಸ್ಲೊವಾಕಿಯಾದಲ್ಲಿ ಜನಿಸಿದ್ದರು. ತಂದೆ ಮಿಲೋಸ್ ಝೆಲ್ನೆಕ್ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರೆ, ತಾಯಿ ಮೇರಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. 1970ರ ದಶಕದ ಮಧ್ಯಭಾಗದಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದು, ಬಳಿಕ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು.
ಇವಾನಾ 1977ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾಗಿದ್ದು, 1992ರಲ್ಲಿ ವಿಚ್ಛೇದನ ಪಡೆದರು. ಇವರಿಗೆ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಎಂಬ ಮೂವರು ಮಕ್ಕಳಿದ್ದಾರೆ. ತಾಯಿಯ ನಿಧನದ ಬಗ್ಗೆ ಮಗ ಎರಿಕ್ ಟ್ರಂಪ್ 'ಇದು ತುಂಬಾ ದುಃಖದ ದಿನ' ಎಂದು ಹೇಳಿಕೊಂಡಿದ್ದಾರೆ. ಮಗಳು ಇವಾಂಕಾ ಕೂಡ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿ ತನ್ನ ತಾಯಿಗೆ ಗೌರವ ಸಲ್ಲಿಸಿದ್ದಾರೆ.