ಗಾಝಾ : ಅಕ್ಟೋಬರ್ 7ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ಗಾಜಾ ಮೇಲೆ 1 ಲಕ್ಷ ಬಾಂಬ್ ಮತ್ತು ರಾಕೆಟ್ಗಳ ಮೂಲಕ ದಾಳಿ ನಡೆಸಿದೆ ಎಂದು ಗಾಝಾದಲ್ಲಿರುವ ಹಮಾಸ್ ನಿಯಂತ್ರಿತ ಸರಕಾರದ ಮಾಧ್ಯಮ ಕಚೇರಿ (ಜಿಎಂಒ) ಹೇಳಿದೆ. ನಾಗರಿಕರನ್ನು ಕೊಲ್ಲುವ ಕ್ರೂರ ಉದ್ದೇಶದಿಂದ 2,000 ಪೌಂಡ್ ತೂಕದ ಬಾಂಬ್ಗಳನ್ನು ಗಾಝಾ ಮೇಲೆ ಹಾಕಲಾಗಿದೆ ಎಂದು ಜಿಎಂಒ ನಿರ್ದೇಶಕ ಇಸ್ಮಾಯೆಲ್ ಅಲ್-ತವಾಬ್ತೆಹ್ ಶನಿವಾರ ರಾತ್ರಿ ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ದಾಳಿಯಿಂದಾಗಿ ಗಾಝಾದಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ 15,207 ಜನ ಮೃತಪಟ್ಟಿದ್ದು, ಕಾಣೆಯಾದವರ ಸಂಖ್ಯೆ 7,500 ಕ್ಕೂ ಹೆಚ್ಚಾಗಿದೆ ಮತ್ತು ಗಾಯಗೊಂಡವರ ಸಂಖ್ಯೆ 40,650 ಕ್ಕೆ ತಲುಪಿದೆ ಎಂದು ಅಲ್-ತವಾಬ್ತೆಹ್ ತಿಳಿಸಿದರು.
ಮಾನವೀಯ ನೆರವಿನ ಪ್ರವೇಶವನ್ನು ತಡೆಯುವ ಇಸ್ರೇಲ್ನ ನೀತಿಗಳನ್ನು ಖಂಡಿಸಿದ ಅವರು, ಮಾರಣಾಂತಿಕ ಸಂಘರ್ಷದಿಂದ ಮುಗ್ಧ ನಾಗರಿಕರನ್ನು ರಕ್ಷಿಸುವ ಸಲುವಾಗಿ ಪ್ರತಿದಿನ ಗಾಝಾಗೆ 1 ಮಿಲಿಯನ್ ಲೀಟರ್ ಇಂಧನ ಪೂರೈಸಲು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಒಂದು ಸಾವಿರ ಟ್ರಕ್ಗಳ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದಲ್ಲದೆ, ಅವಶೇಷಗಳ ಅಡಿಯಲ್ಲಿ ಹೂತುಹೋಗಿರುವ ನೂರಾರು ಶವಗಳನ್ನು ಹೊರತೆಗೆಯಲು ಪರಿಹಾರ, ತುರ್ತು ಪ್ರತಿಕ್ರಿಯೆ ತಂಡಗಳು ಮತ್ತು ನಾಗರಿಕರ ರಕ್ಷಣೆಗಾಗಿ ನೂರಾರು ಉಪಕರಣ ಮತ್ತು ಯಂತ್ರೋಪಕರಣಗಳನ್ನು ಗಾಝಾದೊಳಗೆ ಬರಲು ಅವಕಾಶ ನೀಡುವಂತೆ ಅವರು ಆಗ್ರಹಿಸಿದರು.