ಟೆಲ್ ಅವೀವ್( ಇಸ್ರೇಲ್): ಇರಾನ್ ನ ರೆವಲ್ಯೂಷನರಿ ಗಾರ್ಡ್ಸ್ ಸೋಮವಾರ ಹೈಪರ್ಸಾನಿಕ್ ಕ್ಷಿಪಣಿ ಫತಾಹ್ 2 ಅನ್ನು ಪ್ರದರ್ಶಿಸಿದೆ. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಅಶುರಾ ಏರೋಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ಫತಾಹ್ 2 ಅನ್ನು ಅನಾವರಣಗೊಳಿಸಿದರು ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಜೂನ್ 2023 ರಲ್ಲಿ, ಇರಾನ್ ಫತಾಹ್ 1 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು.
ಕ್ಷಿಪಣಿಯ ಸುಧಾರಿತ ಆವೃತ್ತಿಯು ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ (ಎಚ್ಜಿವಿ) ಅನ್ನು ಒಳಗೊಂಡಿದೆ. ಕ್ಷಿಪಣಿ ಗರಿಷ್ಠ ವೇಗ ತಲುಪಲು ಈ ತಂತ್ರಜ್ಞಾನ ಸಹಾಯ ಮಾಡುತ್ತದೆ. ಫತಾಹ್ 2 ಮ್ಯಾಕ್ 5-20 (6170- 24700 ಕಿ.ಮೀ) ವೇಗ ತಲುಪಬಹುದು ಎಂದು ವರದಿಯಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಸುಧಾರಿತ ಬ್ಯಾಲಿಸ್ಟಿಕ್ ವಿರೋಧಿ ಕ್ಷಿಪಣಿಗಳಿಗಿಂತ ಫತಾಹ್ 2 ಹೆಚ್ಚಿನ ಸಾಮರ್ಥ್ಯ ಹೊಂದಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.
ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧ ಮತ್ತು ವೆಸ್ಟ್ ಬ್ಯಾಂಕ್ನಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾದೊಂದಿಗೆ ಇಸ್ರೇಲ್ ಸಂಘರ್ಷ ನಡೆಯುತ್ತಿರುವ ಮಧ್ಯೆ ಇರಾನ್ ತನ್ನ ಹೊಸ ಕ್ಷಿಪಣಿಯನ್ನು ಅನಾವರಣಗೊಳಿಸಿರುವುದು ಗಮನಾರ್ಹ. ಇಸ್ರೇಲ್ ಯಾವಾಗಲೂ ಇರಾನ್ ಅನ್ನು ಹಮಾಸ್ ಮತ್ತು ಹಿಜ್ಬುಲ್ಲಾ ಎರಡೂ ಸಂಘಟನೆಗಳಿಗೆ ಬೆಂಬಲ ನೀಡುವ ದೇಶವನ್ನಾಗಿ ಪರಿಗಣಿಸಿದೆ.