ಖಾರ್ಟೂಮ್(ಸುಡಾನ್):ಸೇನಾ ಸಂಘರ್ಷಕ್ಕೀಡಾದ ಸುಡಾನ್‌ನಿಂದ ಭಾರತೀಯರ ಏರ್ಲಿಫ್ಟ್ ಆರಂಭವಾಗಿದೆ. ಆಪರೇಷನ್ ಕಾವೇರಿ ಹೆಸರಿನಲ್ಲಿ ನಡೆಸಲಾಗುತ್ತಿರುವ ರಕ್ಷಣ ಕಾರ್ಯಾಚರಣೆಯಲ್ಲಿ ಭಾರತೀಯರನ್ನು ಪೋರ್ಟ್ ಸುಡಾನ್‌ನಿಂದ ಜೆಡ್ಡಾಗೆ ಕರೆತರಲಾಗುತ್ತಿದೆ. ಈಗಾಗಲೇ ಮೂರು ಗುಂಪುಗಳನ್ನಾಗಿ ವಿಂಗಡಿಸಿ 500 ಕ್ಕೂ ಅಧಿಕ ಜನರನ್ನು ಏರ್ಲಿಫ್ಟ್ ಮಾಡಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್, ಭಾರತೀಯ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಸುಡಾನ್ನ ಸ್ಥಳಗಳಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಎಲ್ಲ ಪ್ರಯತ್ನಗಳು ಸಾಗಿವೆ. ಮೂರು ತಂಡಗಳನ್ನು ಈಗಾಗಲೆ ಜೆಡ್ಡಾಕ್ಕೆ ಕರೆತರಲಾಗಿದೆ. ಅವರನ್ನು ಶೀಘ್ರವೇ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ.
ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ 72 ಗಂಟೆಗಳ ವಿರಾಮ ನೀಡಲಾಗಿದೆ. ಹೀಗಾಗಿ ಭಾರತ ಸರ್ಕಾರ ಅಲ್ಲಿನ ಅಧಿಕಾರಿಗಳ ನೆರವಿನಿಂದ ಭಾರತೀಯರ ತುರ್ತು ರಕ್ಷಣೆ ನಡೆಸುತ್ತಿದೆ. ಐಎನ್ಎಸ್ ಸುಮೇಧಾ, ಸಿ-130 ಎರಡು ವಿಮಾನಗಳು ಈಗಾಗಲೇ ಸುಡಾನ್ ತಲುಪಿದ್ದು, ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಕರೆತಂದಿವೆ. ಅಲ್ಲಿ ಎಲ್ಲ ಭಾರತೀಯರನ್ನು ಒಟ್ಟುಗೂಡಿಸಿ ಬಳಿಕ ಅಲ್ಲಿಂದ ಎಲ್ಲರನ್ನೂ ಭಾರತಕ್ಕೆ ಕರೆತರುವ ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ:ಸುಡಾನ್ ಸಂಘರ್ಷ: 72 ಗಂಟೆಗಳ ಕದನವಿರಾಮ ಜಾರಿ
ಐಎನ್ಎಸ್ ಸುಮೇಧಾ ನೌಕೆಯಲ್ಲಿ ಮೊದಲ ಹಂತದಲ್ಲಿ 278 ಭಾರತೀಯರನ್ನು ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಕರೆತರಲಾಗಿದೆ. 135, 121 ಜನರ ಎರಡು ಗುಂಪುಗಳನ್ನು 2 ವಿಮಾನಗಳಲ್ಲಿ ಕರೆತರಲಾಗಿದೆ. ಜೆಡ್ಡಾದಲ್ಲಿ ತಂಗಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಎಲ್ಲ ಭಾರತೀಯರನ್ನು ಜೆಡ್ಡಾದಲ್ಲಿ ಉಳಿಯುವಂತೆ ಮಾಡಲಾಗುವುದು. ಅವರಿಗೆ ಸುಸಜ್ಜಿತವಾದ ಹಾಸಿಗೆಗಳು, ಊಟದ ವ್ಯವಸ್ಥೆ, ಶೌಚಾಲಯ, ವೈದ್ಯಕೀಯ ಸೌಲಭ್ಯ, ಇಂಟರ್ನೆಟ್ ಸೌಲಭ್ಯ ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಸುಡಾನ್ ಸಂಘರ್ಷದ ನಡುವೆ, ಭಾರತೀಯ ವಾಯುಪಡೆಯ ವಿಮಾನಗಳು ಸಂಕಷ್ಟದಲ್ಲಿರುವ ಭಾರತೀಯರ ಸ್ಥಳಾಂತರಿಸುವ ಕಾರ್ಯಾಚರಣೆಗಾಗಿ ಪೋರ್ಟ್ ಸುಡಾನ್‌ಗೆ ಬಂದಿಳಿದಿವೆ. ಐಎನ್ಎಸ್ ಸುಮೇಧಾ ಕೂಡ ಪೋರ್ಟ್ ಸುಡಾನ್ ತಲುಪಿದೆ. ಭಾರತೀಯರ ಸ್ಥಳಾಂತರ ಶುರುವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದರು.
72 ಗಂಟೆ ಕದನ ವಿರಾಮ:ಅಧಿಕಾರ ಸ್ಥಾಪನೆಗಾಗಿ ಇಬ್ಬರು ಸೇನಾಧಿಕಾರಿಗಳ ಮಧ್ಯೆ ನಡೆಯುತ್ತಿರುವ ಕಾಳಗಕ್ಕೆ 72 ಗಂಟೆಗಳ ವಿರಾಮ ನೀಡಲಾಗಿದೆ. ಆ ದೇಶದಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಿದ ನಂತರ ಸುಡಾನ್‌ನಲ್ಲಿ ಉಭಯ ಬಣಗಳು ಸೋಮವಾರದಿಂದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.
ಏಪ್ರಿಲ್ 15 ರಂದು ಸುಡಾನ್ ಸೇನೆ ಮತ್ತು ಆರ್‌ಎಸ್‌ಎಫ್ ಅರೆಸೈನಿಕ ಗುಂಪಿನ ನಡುವೆ ಹೋರಾಟ ಆರಂಭವಾಗಿದ್ದು, ಹಿಂಸಾಚಾರದಲ್ಲಿ ಈವರೆಗೆ ಕನಿಷ್ಠ 427 ಜನ ಸಾವಿಗೀಡಾಗಿದ್ದಾರೆ. ಯುದ್ಧದಿಂದ ಹಲವಾರು ಆಸ್ಪತ್ರೆಗಳು ಹಾನಿಗೀಡಾಗಿವೆ. ರಾಜಧಾನಿ ಖಾರ್ಟೂಮ್‌ನಲ್ಲಿ ಲಕ್ಷಾಂತರ ಜನ ತಮ್ಮ ಮನೆಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಲಕ್ಷಾಂತರ ನಾಗರಿಕರು ಆಹಾರ ಮತ್ತು ನೀರಿನ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಔಷಧ ಹಾಗೂ ಇತರ ತುರ್ತುಸೇವೆಗಳಿಗಾಗಿ ನಾಗರಿಕರು ಪರದಾಡುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ:ಸುಡಾನ್‌ನಿಂದ ಭಾರತೀಯರನ್ನು ಕರೆತರಲು 'ಆಪರೇಷನ್ ಕಾವೇರಿ' ಪ್ರಾರಂಭ