ವಾಷಿಂಗ್ಟನ್: 4G ಹಾಗೂ 5G ಮೊಬೈಲ್‌ಗಳು ಮತ್ತು ವೈ-ಫೈ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಶಕ್ತಿಯುತಗೊಳಿಸುವ ಪ್ರಮುಖ ತಂತ್ರಜ್ಞಾನವಾದ MIMO ವೈರ್‌ಲೆಸ್ ಆವಿಷ್ಕಾರ ಮಾಡಿರುವ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಉನ್ನತ ಭಾರತೀಯ-ಅಮೆರಿಕನ್ ವಿಜ್ಞಾನಿ ಆರೋಗ್ಯಸ್ವಾಮಿ ಪೌಲ್‌ರಾಜ್ ಅವರಿಗೆ ಸಾಧನೆಯನ್ನು ಗುರುತಿಸಿ ಫ್ಯಾರಡೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಳೆದ ವಾರಾಂತ್ಯದಲ್ಲಿ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಪೌಲ್‌ರಾಜ್ ಅವರಿಗೆ "MIMO ವೈರ್‌ಲೆಸ್‌ನ ಆವಿಷ್ಕಾರ, ಪ್ರಗತಿ ಮತ್ತು ವಾಣಿಜ್ಯೀಕರಣಕ್ಕಾಗಿ" ಎಂಬ ಉಲ್ಲೇಖವಿರುವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೌಲ್‌ರಾಜ್ ಅವರು ಫ್ಯಾರಡೆ ಪದಕ ಪಡೆದ 100ನೇ ವ್ಯಕ್ತಿಯಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಇಂಜಿನಿಯರ್ಗಳು ಹಾಗೂ ವಿಜ್ಞಾನಿಗಳಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಈ ಫ್ಯಾರಡೆ. ಮೊದಲ ಫ್ಯಾರಡೆ ಪ್ರಶಸ್ತಿಯನ್ನು 1922ರಲ್ಲಿ ಆಲಿವರ್ ಹೆವಿಸೈಡ್ ಅವರಿಗೆ ನೀಡಲಾಯಿತು. ಫ್ಯಾರಡೆ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಜಾಗತಿಕ ಮನ್ನಣೆಯಾಗಿದೆ ಎಂದು ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಪೌಲ್‌ರಾಜ್ ತಮ್ಮ ಸಂತಸ ಹಂಚಿಕೊಂಡಿದ್ದು, "IET ಫ್ಯಾರಡೆ ಪದಕವನ್ನು ಪಡೆದಿರುವುದಕ್ಕೆ ನನಗೆ ಅತ್ಯಂತ ಗೌರವವಿದೆ. ಡಿಜಿಟಲ್ ಪ್ರವೇಶವು ಅವಕಾಶ ಸೃಷ್ಟಿಯ ವಿಷಯದಲ್ಲಿ ನಿಜವಾಗಿಯೂ ಸಮೀಕರಣವಾಗಿದೆ ಎಂದು ನಾನು ನಂಬುತ್ತೇನೆ. 5G ಜೊತೆಗೆ ಭಾರತ ತಂತ್ರಜ್ಞಾನದ ಉದ್ಯಮಗಳಲ್ಲಿ ಪ್ರವೇಶಿಸಲು ಮತ್ತು ಯಶಸ್ವಿಯಾಗಲು ಸ್ಪಷ್ಟ ಸಾಮರ್ಥ್ಯ ಹೊಂದಿದೆ" ಎಂದು ಹೇಳಿದರು.
"ಈ ಕೈಗಾರಿಕೆಗಳಲ್ಲಿನ ಎಲ್ಲಾ ಮೌಲ್ಯವರ್ಧನೆಯು ನಾವೀನ್ಯತೆ ಮತ್ತು IP ಮಾಲೀಕತ್ವದಿಂದ ಬಂದಿರುವುದರಿಂದ, ಉದ್ಯಮ ಪ್ರವೇಶಕ್ಕೆ ಅನೇಕ ಅಡೆತಡೆಗಳನ್ನು ಹೊಂದಿದೆ. ಯಶಸ್ವಿ ಹಾದಿಯನ್ನು ರೂಪಿಸಲು ಭಾರತವು ಎಲ್ಲಾ ಉದ್ಯಮದ ಡೈನಾಮಿಕ್ಸ್ ಅನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು" ಎಂದರು.