ನವದೆಹಲಿ:ಭೀಕರಭೂಕಂಪದಿಂದ ತೀವ್ರ ಸಂಕಷ್ಟದಲ್ಲಿರುವ ಸಿರಿಯಾ ಮತ್ತು ಟರ್ಕಿ ದೇಶಗಳಿಗೆ ಭಾರತ ನೆರವಿನ ಹಸ್ತ ಚಾಚಿದೆ. ಪರಿಹಾರ ಕಾರ್ಯಗಳಿಗಾಗಿ ಅಗತ್ಯ ವಸ್ತುಗಳು, ತುರ್ತು ಮತ್ತು ನಿರ್ಣಾಯಕ ಆರೈಕೆ ಔಷಧಿಗಳನ್ನು ಹೊತ್ತ 7ನೇ ವಿಮಾನ ಭಾರತದಿಂದ ಸಂಕಷ್ಟಪೀಡಿತ ಟರ್ಕಿಗೆ ತೆರಳಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
ಶನಿವಾರ ಸಂಜೆ ಮತ್ತೊಂದು IAF C-17 ವಿಮಾನ ಸಿರಿಯಾ ಮತ್ತು ಟರ್ಕಿಗೆ ಪರಿಹಾರ ಸಾಮಗ್ರಿ ಮತ್ತು ತುರ್ತು ಸಲಕರಣೆಗಳನ್ನು ಹೊತ್ತೊಯ್ದಿದೆ. ಡಮಾಸ್ಕಸ್‌ನಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಿದ ನಂತರ, ವಿಮಾನವು ಅದಾನದ ಕಡೆಗೆ ಸಂಚರಿಸಲಿದೆ ಎಂದು ಎಂಇಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ವಿಮಾನವು 35 ಟನ್‌ಗಳಷ್ಟು ಪರಿಹಾರ ಸಾಮಗ್ರಿ, ವೈದ್ಯಕೀಯ ನೆರವು, ಕ್ರಿಟಿಕಲ್ ಕೇರ್ ಔಷಧಿ, ವೈದ್ಯಕೀಯ ಉಪಕರಣಗಳು ಮತ್ತು ಉಪಭೋಗ್ಯ ವಸ್ತುಗಳನ್ನು ಸಾಗಿಸುತ್ತಿದೆ ಎಂದು ಹೇಳಿದರು.
ಏನಿದು ಆಪರೇಷನ್ ದೋಸ್ತ್?: "ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಆಪರೇಷನ್ ದೋಸ್ತ್ ಭಾಗವಾಗಿ ಭಾರತೀಯ ತಂಡಗಳು ಹಗಲು ರಾತ್ರಿ ಶ್ರಮಿಸುತ್ತಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 28 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ಸಾವಿರಾರು ಜನರು ಗಾಯಗೊಂಡಿದ್ದು, ಲೆಕ್ಕಕ್ಕೆ ಸಿಗದಷ್ಟು ಜನರು ನಿರಾಶ್ರಿತರಾಗಿದ್ದಾರೆ. ಈ ನಡುವೆ ಸಂಕಷ್ಟದಲ್ಲಿರುವವರ ರಕ್ಷಣೆಗಾಗಿ ಆಪರೇಷನ್ ದೋಸ್ತ್ ಕಾರ್ಯಾಚರಣೆ ಆರಂಭಿಸಿರುವ ಭಾರತ, ವಿಶೇಷ ವಿಮಾನಗಳ ಮೂಲಕ ಅಗತ್ಯ ನೆರವು ಹಾಗೂ ಸಾಮಗ್ರಿ ಪೂರೈಸುತ್ತಿದೆ. ಜತೆಗೆ ಟರ್ಕಿಯಲ್ಲಿ ಬೀಡು ಬಿಟ್ಟಿರುವ ಭಾರತದ ತಜ್ಞರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.