ವಾಷಿಂಗ್ಟನ್ : ಮೋಟಾರ್ ಸೈಕಲ್ ಮತ್ತು ಕಾರುಗಳನ್ನು ತಯಾರಿಸುವ ಅಮೆರಿಕದ ಕಂಪನಿಗಳ ಮೇಲೆ ಭಾರತವು ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿದ್ದು, ತಾವು 2024ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಭಾರತದ ವಿರುದ್ಧ ಅದೇ ರೀತಿಯ ಪ್ರತೀಕಾರಾತ್ಮಕ ತೆರಿಗೆಗಳನ್ನು ವಿಧಿಸುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ಗಳ ಮೇಲಿನ ಆಮದು ಸುಂಕವನ್ನು ಟ್ರಂಪ್ ಉಲ್ಲೇಖಿಸಿದ್ದಾರೆ. 2019 ರಲ್ಲಿ ಅಧ್ಯಕ್ಷರಾಗಿದ್ದಾಗಿನಿಂದ ಭಾರತವು ರಫ್ತು ಸುಂಕವನ್ನು ಶೂನ್ಯಕ್ಕೆ ಇಳಿಸಬೇಕೆಂದು ಅವರು ಬಯಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ಯುಎಸ್ಗೆ ಬರುವ ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಇದೇ ರೀತಿಯ ತೆರಿಗೆಯನ್ನು ವಿಧಿಸಿದರೆ ಏನಾಗುತ್ತದೆ? ಭಾರತವು ನಮ್ಮ ದೇಶದ ಸಾಮಗ್ರಿಗಳ ವಿರುದ್ಧ ಸುಂಕ ವಿಧಿಸಿದರೆ ನಾನೂ ಸಹ ಅಂಥದೇ ಸುಂಕ ವಿಧಿಸುವ ಪರವಾಗಿದ್ದೇನೆ. ಭಾರತ ಭಾರಿ ಪ್ರಮಾಣದ ಸುಂಕ ವಿಧಿಸುತ್ತಿದೆ. ಹಾರ್ಲೆ-ಡೇವಿಡ್ಸನ್ ವಿಷಯದಲ್ಲಿ ಇದು ನನ್ನ ಗಮನಕ್ಕೆ ಬಂದಿದೆ" ಎಂದು ಹೇಳಿದರು.
ಭಾರತದವರು ಕೂಡ ಮೋಟರ್ ಬೈಕ್ಗಳನ್ನು ತಯಾರಿಸುತ್ತಿದ್ದಾರೆ. ಅವನ್ನು ಅವರು ಅಮೆರಿಕಕ್ಕೆ ಕಳುಹಿಸಿದಾಗ ಇಲ್ಲಿ ಅವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ ನಮ್ಮ ಬೈಕ್ಗಳು ಅಲ್ಲಿಗೆ ಹೋದರೆ ಶೇ 100, ಶೇ 150 ಅಥವಾ ಶೇ 200 ರಷ್ಟು ತೆರಿಗೆ ಪಾವತಿಸಬೇಕಿದೆ. ಯಾಕೆ ಹೀಗೆ? ಭಾರತದವರು ಕೂಡ ವ್ಯಾಪಾರವನ್ನೇ ಮಾಡುತ್ತಿದ್ದಾರೆ ಅಲ್ಲವೇ? ಎಂದು ಟ್ರಂಪ್ ಪ್ರಶ್ನಿಸಿದರು. ನೀವೇನೇ ಹೇಳಿ, ಅವರು ನಮಗೆ ಸುಂಕ ವಿಧಿಸುತ್ತಿದ್ದರೆ ನಾವೂ ಅವರ ಮೇಲೆ ಸುಂಕ ವಿಧಿಸಬೇಕು ಅಷ್ಟೇ ಎಂದು ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದರು.