ಫ್ಲೋರಿಡಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಫ್ಲೋರಿಡಾದಲ್ಲಿರುವ ಮಾರ್ ಎ ಲಾಗೊ ರೆಸಾರ್ಟ್ ಮೇಲೆ ಎಫ್‌ಬಿಐ ದಾಳಿ ನಡೆಸಿದೆ. ಸ್ವತಃ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುವ ಮೂಲಕ ಈ ಮಾಹಿತಿ ಬೆಳಕಿಗೆ ಬಂದಿದೆ. ಪಾಮ್ ಬೀಚ್‌ನಲ್ಲಿರುವ ಮಾರ್ ಎ ಲಾಗೋ ಮೇಲೆ ಎಫ್‌ಬಿಐ ಅಧಿಕಾರಿಗಳು ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಟ್ರಂಪ್ ಶ್ವೇತಭವನವನ್ನು ತೊರೆದ ನಂತರ ಫ್ಲೋರಿಡಾಕ್ಕೆ ತೆಗೆದುಕೊಂಡು ಬಂದಿರುವ ಕೆಲ ಅಧ್ಯಕ್ಷರ ಅಧಿಕೃತ ಪೇಪರ್‌ಗಳಿಗಾಗಿ ಎಫ್‌ಬಿಐ ಈ ದಾಳಿ ನಡೆಸಿ, ಪರಿಶೀಲಿಸುತ್ತಿದೆ ಎಂದು ಹೇಳಲಾಗುತ್ತಿದೆ. ಫ್ಲೋರಿಡಾದ ಮಾರ್ ಎ ಲಾಗೋದಲ್ಲಿರುವ ಅವರ ಸುಂದರವಾದ ಪಾಮ್ ಬೀಚ್ ಮನೆಯ ಮೇಲೆ ಎಫ್‌ಬಿಐ ದಾಳಿ ನಡೆಸಿದೆ. ಬೀಚ್‌ನಲ್ಲಿರುವ ಮನೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಮತ್ತು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಎಫ್‌ಬಿಐ ದಾಳಿ ನಡೆಸಿದಾಗ, ಫ್ಲೋರಿಡಾದಲ್ಲಿ ಟ್ರಂಪ್ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಇದು ದೇಶಕ್ಕೆ ಕರಾಳ ಸಮಯ ಎಂದ ಟ್ರಂಪ್: ಇದು ನಮ್ಮ ದೇಶಕ್ಕೆ ಕರಾಳ ಸಮಯ ಎಂದು ಟ್ರಂಪ್ ಹೇಳಿದ್ದಾರೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಿಗ್ಯಾರಿಗೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ತನಿಖಾ ಸಂಸ್ಥೆಗಳ ಸಹಕಾರದ ಹೊರತಾಗಿಯೂ ಇಂತಹ ದಾಳಿಗಳನ್ನು ನಡೆಸಲಾಯಿತು. ನ್ಯಾಯಾಂಗ ವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಂತೆ ಆಗಿದೆ. ಇದು 2024 ರಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಬಯಸದ ಎಡ ಪ್ರಜಾಪ್ರಭುತ್ವವಾದಿಗಳ ದಾಳಿಯಾಗಿದೆ ಎಂದು ಟ್ರಂಪ್ ಆಕ್ರೋಶ ಹೊರ ಹಾಕಿದ್ದಾರೆ.