ಲಂಡನ್(ಇಂಗ್ಲೆಂಡ್): ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದ ಇಂಗ್ಲೆಂಡ್ ಮಾಜಿ ಪಿಎಂ ಬೋರಿಸ್ ಜಾನ್ಸನ್ ಇದೀಗ ಸಂಸತ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಸಂಸತ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಬೋರಿಸ್ ಜಾನ್ಸನ್ ಅವರು ಪಾರ್ಟಿಗೇಟ್ ಹಗರಣದಲ್ಲಿ ಸಿಲುಕಿ ಟೀಕೆಗೆ ಗುರಿಯಾಗಿದ್ದಲ್ಲದೇ, ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿದಿದ್ದರು. ಜಾನ್ಸನ್ ಅವರು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರಿ ಕಟ್ಟಡದಲ್ಲಿ ನಿಯಮ ಉಲ್ಲಂಘಿಸಿ ತನ್ನ ಸಹಾಯಕರಾಗಿದ್ದ ಮಾರ್ಟಿನ್ ರೆನಾಲ್ಡ್ಸ್ ಮತ್ತು ಶೆಲ್ಲಿ ವಿಲಿಯಮ್ಸ್ ವಾಕರ್ ಸೇರಿದಂತೆ ಹಲವು ಜನರೊಂದಿಗೆ ಪಾನಕೂಟದಲ್ಲಿ ಭಾಗಿಯಾಗಿದ್ದರು.
ಹಠಾತ್ತಾಗಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಮಾತನಾಡಿರುವ ಬೋರಿಸ್ ಜಾನ್ಸನ್, ನಾನು ಆಕ್ಸ್‌ಬ್ರಿಡ್ಜ್ ಮತ್ತು ಸೌತ್ ರುಯಿಸ್ಲಿಪ್‌ನಲ್ಲಿರುವ ನನ್ನ ಅಸೋಸಿಯೇಷನ್‌ಗೆ ಪತ್ರ ಬರೆದಿದ್ದು, ನಾನು ತಕ್ಷಣವೇ ಸಂಸದ ಸ್ಥಾನದಿಂದ ಕೆಳೆಗೆ ಇಳಿಯುತ್ತಿದ್ದೇನೆ. ನನ್ನ ಅದ್ಭುತ ಕ್ಷೇತ್ರವನ್ನು ತೊರೆಯಲು ನನಗೆ ತುಂಬಾ ವಿಷಾದವಿದೆ. ಮೇಯರ್ ಮತ್ತು ಸಂಸದರಾಗಿ ಸಲ್ಲಿಸಿದ ನನ್ನ ಸೇವೆ ಕುರಿತು ನನಗೆ ಅಪಾರ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:COVID-19 Coordinator: ಅಮೆರಿಕದ COVID ಸಂಯೋಜಕ ಹುದ್ದೆಯಿಂದ ಡಾ.ಆಶಿಶ್ ಝಾ ನಿರ್ಗಮನ
ನಾನು ನನ್ನ ಅವಧಿಯಲ್ಲಿ ಎಲಿಜಬೆತ್ ಲೈನ್‌ನಲ್ಲಿ ವಿಶಾಲವಾದ ಹೊಸ ರೈಲುಮಾರ್ಗದ ನಿರ್ಮಾಣಕ್ಕೆ ಸಾಕಷ್ಟು ಸಹಾಯ ಮಾಡಿದೆ. ಅಲ್ಲದೆ, ಹಿಲ್ಲಿಂಗ್‌ಡನ್‌ಗಾಗಿ ಒಂದು ಅದ್ಭುತವಾದ ಹೊಸ ಅತ್ಯಾಧುನಿಕ ಆಸ್ಪತ್ರೆಗಾಗಿ ಪೂರ್ಣ ಪ್ರಮಾಣದ ಹಣವನ್ನು ಒದಗಿಸಿದ್ದೇನೆ. ಈಗ ಅದರ ಕಾರ್ಯಗಳು ಪ್ರಾರಂಭವಾಗಿವೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರಾಜೀನಾಮೆ ಬಳಿಕ ಜಾನ್ಸನ್ ಹೇಳಿದ್ದಾರೆ.
ನಾನು ಹಗರಣ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಹೇಳಿಲ್ಲ. ತನಿಖಾ ಸಮಿತಿ ನಾನು ತಪ್ಪು ಮಾಡಿದ್ದೇನೆ ಎಂಬುದಕ್ಕೆ ಯಾವ ಪುರಾವೆಯನ್ನೂ ನೀಡಿಲ್ಲ. ನಾನು ಸದನದಲ್ಲಿ ಸತ್ಯವನ್ನೇ ಮಾತನಾಡಿದ್ದೇನೆ. ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಇದೇ ವೇಳೆ ಮಾಜಿ ಪ್ರಧಾನಿ ಜಾನ್ಸನ್ ಆರೋಪಿಸಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ ಜಾನ್ಸನ್‌ರನ್ನು ಸಂಸದೀಯ ಸಮಿತಿಯು ಪದೇ ಪದೇ ನೀವು ಕೋವಿಡ್ ನಿಯಮವಿದ್ದ ಸಮಯದಲ್ಲಿ ಪಾರ್ಟಿಗೆ ಹಾಜರಾಗಿದ್ದೀರಾ, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದೀರಾ, ಸಂಸತನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ ರಾಜೀನಾಮೇ ನೀಡಬೇಕು ಎಂದು ಕೇಳುತ್ತಿದ್ದರು.
ಇವರು ವಿರುದ್ಧ ಪಾರ್ಟಿಗೇರ್ ಹಗರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯಿಂದ ವರದಿ ಸಲ್ಲಿಕೆಯಾಗಿದ್ದು, ಇವರು ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ, ವರದಿ ಬಿಡುಗಡೆಯಾಗುವೆ ಮುನ್ನವೇ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈಗ ತೆರವಾಗಿರುವ ಸಂಸತ್ ಸ್ಥಾನಕ್ಕೆ ಉಪಚುನಾವಣೆ ನಡೆಯುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ಗೆ ಸಂಕಷ್ಟ: ಗೌಪ್ಯ ದಾಖಲೆ ಕದ್ದ ಕೇಸಲ್ಲಿ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಕೆ