ಗಾಜಾ/ಜೆರುಸಲೇಂ:ಪ್ಯಾಲೆಸ್ಟೈನ್ ಹಮಾಸ್ ಉಗ್ರರ ದಮನ ಕಾರ್ಯ ನಡೆಸುತ್ತಿರುವ ಇಸ್ರೇಲಿ ಪಡೆಗಳು, ಗಾಜಾ ಪಟ್ಟಿಯನ್ನು ತೊರೆಯಲು ಜನರಿಗೆ 24 ಗಂಟೆಗಳ ಅವಕಾಶ ನೀಡಿದ್ದವು. ಇಂದಿನ 9ನೇ ದಿನದ ಯುದ್ಧದಲ್ಲಿ ಜನರ ಸ್ಥಳಾಂತರಕ್ಕಾಗಿ 3 ಗಂಟೆಗಳ ಹೆಚ್ಚುವರಿ ಅವಕಾಶ ನೀಡಿದ್ದು, ಸಣ್ಣ ಕದನ ವಿರಾಮ ನೀಡಿದೆ. ಇದೇ ವೇಳೆ ಲೆಬನಾನ್ನಿಂದ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ದಾಳಿ ಆರಂಭಿಸಿದ್ದಾರೆ.
ಗಾಜಾ ಪಟ್ಟಿಯಲ್ಲಿ ಉಗ್ರ ನೆಲೆಗಳನ್ನು ಧ್ವಂಸ ಮಾಡುತ್ತಿರುವ ಇಸ್ರೇಲ್ ಪಡೆಗಳು, ಯುದ್ಧ ಆರಂಭವಾಗಿ 9ನೇ ದಿನದ ವೇಳೆಗೆ 2,329 ಪ್ಯಾಲೆಸ್ಟೈನಿಯನ್ನರನ್ನು ಬಲಿ ಪಡೆದಿವೆ. ಇದು 2014 ರ ಯುದ್ಧದಲ್ಲಿ ಆರು ವಾರಗಳಲ್ಲಿ ನಡೆದ ಸಾವಿಗಿಂತಲೂ ಹೆಚ್ಚು. ಇದೇ ವೇಳೆ ಇಸ್ರೇಲ್‌ನ 1,300 ಮಂದಿ ಸಾವಿಗೀಡಾಗಿದ್ದು, ಇದರಲ್ಲಿ ಬಹುಪಾಲು ನಾಗರಿಕರೇ ಇದ್ದಾರೆ. ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಅಮಾನವೀಯ ದಾಳಿ ವೇಳೆ ಸಾವಿಗೀಡಾದವರ ಸಂಖ್ಯೆಯೇ ಹೆಚ್ಚು.
3 ಗಂಟೆ ಕದನ ವಿರಾಮ:ಇಸ್ರೇಲಿ ರಕ್ಷಣಾ ಪಡೆಗಳು ಉತ್ತರ ಗಾಜಾದಿಂದ ಜನರು ಸ್ಥಳಾಂತರಗೊಳ್ಳಲು 3 ಗಂಟೆಗಳ ಕಾಲಾವಕಾಶ ಘೋಷಿಸಿದೆ. ಈ ಪ್ರದೇಶದಲ್ಲಿ ವಾಸಿಸುವ ಸುಮಾರು 1.1 ಮಿಲಿಯನ್ (10 ಲಕ್ಷಕ್ಕೂ ಅಧಿಕ) ಜನರು ಶೀಘ್ರವೇ ಸ್ಥಳಾಂತರವಾಗಿ ಎಂದು ಸೂಚಿಸಿದೆ. ನೀಡಿದ ಗಡುವಿನಲ್ಲಿ ಯಾವುದೇ ಸೇನಾ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದಿದೆ.
ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸುವ ನಕ್ಷೆಯನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಇಸ್ರೇಲ್ ಪಡೆಗಳು, ಉತ್ತರ ಗಾಜಾದ ನಿವಾಸಿಗಳ ಸುರಕ್ಷತೆಗಾಗಿ ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ. ನಮ್ಮ ಪಡೆಗಳು ಈ ಮಾರ್ಗದಲ್ಲಿ ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳುವುದಿಲ್ಲ ಎಂದು ಖಚಿತ ಭರವಸೆ ನೀಡುತ್ತೇವೆ. ದಯವಿಟ್ಟು, ಉತ್ತರ ಗಾಜಾದಿಂದ ದಕ್ಷಿಣದ ಕಡೆಗೆ ಶೀಘ್ರವೇ ತೆರಳಿ. ನಿಮ್ಮ ಮತ್ತು ಕುಟುಂಬಗಳ ಸುರಕ್ಷತೆಯೇ ಮುಖ್ಯ. ನಮ್ಮ ಸೂಚನೆಗಳನ್ನು ಅನುಸರಿಸಿ ಎಂದು ಮನವಿ ಮಾಡಲಾಗಿದೆ.