ನವದೆಹಲಿ: ಭಾರತದ ತೀವ್ರ ಆಕ್ಷೇಪದ ನಡುವೆಯೂ ಚೀನಾದ ಬೇಹುಗಾರಿಕಾ ಹಡಗೊಂದು ಶ್ರೀಲಂಕಾದ ಹಂಬಂಟೋಟಾ ಬಂದರಿಗೆ ಬಂದು ಲಂಗರು ಹಾಕಿದೆ. ಶ್ರೀಲಂಕಾ ಅಧೀನದ ಕಡಲಿನಲ್ಲಿ ಬೇಹುಗಾರಿಕೆ ನಡೆಸುವುದಿಲ್ಲ ಎಂಬ ಷರತ್ತಿನ ಮೇಲೆ ಯುವಾನ್ ವಾಂಗ್-5 ಹಡಗು ಲಂಗರು ಹಾಕಲು ಅನುಮತಿ ನೀಡಲಾಗಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 22 ರವರೆಗೆ ಚೀನಾದ ಬಂದರಿನಲ್ಲಿ ಹಡಗು ಉಳಿಯಲು ಅನುಮತಿ ನೀಡಲಾಗಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಲಂಕಾ ಬಂದರಿಗೆ ಬಂದ ಚೀನಾ ಬೇಹುಗಾರಿಕಾ ಹಡಗು: ಭಾರತದ ಆಕ್ಷೇಪ
ಲಂಕಾ ಬಂದರಿಗೆ ಆಗಮಿಸಿದ ಚೀನಾ ಹಡಗು. ಭಾರತದ ನೌಕೆಗಳ ಮೇಲೆ ಬೇಹುಗಾರಿಕೆ ನಡೆಸುವ ಆತಂಕ. ಚೀನಾ ಹಡಗು ಆಗಮಿಸಲು ಅವಕಾಶ ನೀಡಿದ್ದಕ್ಕೆ ಶ್ರೀಲಂಕಾ ವಿರುದ್ಧ ಭಾರತ ಆಕ್ಷೇಪ.
ಯುವಾನ್ ವಾಂಗ್-5 ಚೀನಾದ ಇತ್ತೀಚಿನ ಪೀಳಿಗೆಯ ಬಾಹ್ಯಾಕಾಶ-ಟ್ರ್ಯಾಕಿಂಗ್ ಹಡಗುಗಳಲ್ಲಿ ಒಂದಾಗಿದೆ. ಇದನ್ನು ಉಪಗ್ರಹ, ರಾಕೆಟ್ ಮತ್ತು ಖಂಡಾಂತರ ಕ್ಷಿಪಣಿ ಉಡಾವಣೆಗಳ ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ ವಿದೇಶಿ ಮಿಲಿಟರಿ ವಿಶ್ಲೇಷಕರು ಹೇಳಿದ್ದಾರೆ. ತನ್ನ ವಿರುದ್ಧ ಬೇಹುಗಾರಿಕೆ ನಡೆಸಲು ಚೀನಾ ಈ ಹಡಗನ್ನು ಬಳಸಲಿದೆ ಎಂದು ಭಾರತವು ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹಲವಾರು ಭಾರತೀಯ ಮಾಧ್ಯಮಗಳು ಇದನ್ನು ಡ್ಯುಯಲ್-ಯೂಸ್ ಸ್ಪೈ ಶಿಪ್ ಎಂದು ಕರೆದಿವೆ. ಶಿಪ್ಪಿಂಗ್ ಅನಾಲಿಟಿಕ್ಸ್ ವೆಬ್‌ಸೈಟ್‌ಗಳು ಇದನ್ನು ಸಂಶೋಧನೆ ಮತ್ತು ಸಮೀಕ್ಷೆಯ ಹಡಗು ಎಂದು ಹೇಳಿವೆ.
ಭಾರತೀಯ ಹಡಗುಗಳು ಶ್ರೀಲಂಕಾಕ್ಕೆ ತೆರಳುವಾಗ ಬೇಹುಗಾರಿಕೆ ನಡೆಸಿ ಹಡಗಿನ ಮಾಹಿತಿಗಳನ್ನು ಚೀನಾ ಬೇಹುಗಾರಿಕಾ ಹಡಗು ಕದಿಯಬಹುದು ಎಂದು ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಹಡಗಿನ ಆಗಮನದ ವಿರುದ್ಧ ಭಾರತವು ಶ್ರೀಲಂಕಾ ಸರ್ಕಾರಕ್ಕೆ ಮೌಖಿಕ ಪ್ರತಿಭಟನೆಯನ್ನು ಸಲ್ಲಿಸಿದೆ.