ಗಾಜಾ ಪಟ್ಟಿ(-ಪ್ಯಾಲೆಸ್ತೀನ್): ಉತ್ತರ ಗಾಜಾ ಪಟ್ಟಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಗುರುವಾರ ಸಂಜೆ ವಸತಿ ಕಟ್ಟಡದಲ್ಲಿ ಶೇಖರಿಸಿಡಲಾಗಿದ್ದ ಗ್ಯಾಸೋಲಿನ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ 21 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರದೇಶದ ಹಮಾಸ್ ಆಡಳಿತಗಾರರು ತಿಳಿಸಿದ್ದಾರೆ.
ಇಸ್ರೇಲಿ-ಪ್ಯಾಲೆಸ್ತೀನ್ ಸಂಘರ್ಷದ ಹೊರತಾಗಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತಿದೊಡ್ಡ ದುರಂತ ಇದಾಗಿದೆ. ತುಂಬಾ ಜನ ಕಿಕ್ಕಿರಿದು ವಾಸವಿದ್ದ ಜಬಾಲಿಯಾ ಶಿಬಿರದಲ್ಲಿನ ಮೂರು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಹೇಳಿದೆ.
ಕಟ್ಟಡದಲ್ಲಿ ಸಂಗ್ರಹಿಸಲಾಗಿದ್ದ ಗ್ಯಾಸೋಲಿನ್ ಬೆಂಕಿಗೆ ಕಾರಣ ಎಂದು ಹಮಾಸ್ ನಿಯಂತ್ರಣದಲ್ಲಿರುವ ಗಾಜಾದಲ್ಲಿನ ಸಿವಿಲ್ ಡಿಫೆನ್ಸ್ ಹೇಳಿದೆ. ಗ್ಯಾಸೋಲಿನ್ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆದರೆ, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೂರಾರು ಜನ ಬೀದಿಯಲ್ಲಿ ಹೊರಗೆ ಜಮಾಯಿಸಿ ಅಗ್ನಿಶಾಮಕ ವಾಹನ ಮತ್ತು ಆಂಬ್ಯುಲೆನ್ಸ್‌ಗಳಿಗಾಗಿ ಕಾಯುತ್ತಿರುವುದು ಮತ್ತು ಕಿಟಕಿಗಳಿಂದ ಜ್ವಾಲೆ ಬರುತ್ತಿರುವ ದೃಶ್ಯ ಕಾಣಿಸಿವೆ.