ಲಂಡನ್: ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಭಾನುವಾರ ಘೋಷಿಸಿದ್ದಾರೆ. ಈ ಮೂಲಕ ಮುಂಚೂಣಿಯಲ್ಲಿರುವ ರಿಷಿ ಸುನಕ್ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ 100 ಸಂಸದರ ನಾಮನಿರ್ದೇಶನವನ್ನು ಈಗಾಗಲೇ ಗಳಿಸಿದ್ದಾರೆ. ಆದರೆ ಟೋರಿ ಪಕ್ಷದ ಏಕತೆಯ ಹಿತಾಸಕ್ತಿಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ಮಾತನಾಡಿರುವ ಬೋರಿಸ್, ನನ್ನ ನಾಮನಿರ್ದೇಶನವನ್ನು ನಾನು ಮುಂದುವರೆಸುವುದಿಲ್ಲ. ನಾನು ಮಾಡಬೇಕಾಗಿರುವುದು ಇನ್ನೂ ಸಾಕಷ್ಟು ಇದೆ. ಮುಂದೆ ಯಾರೇ ಪ್ರಧಾನಿಯಾಗಿ ಆಯ್ಕೆಯಾದರೂ ಅವರಿಗೆ ಬೆಂಬಲ ನೀಡುತ್ತೇನೆ. ನಾನು ರಿಷಿ ಮತ್ತು ಪೆನ್ನಿ ಇಬ್ಬರೊಂದಿಗೂ ಮಾತನಾಡಿದ್ದೇನೆ. ನಾವು ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಒಟ್ಟಿಗೆ ಇರುತ್ತೇವೆ ಎಂದು ಜಾನ್ಸನ್ ಹೇಳಿದರು.
ಇದನ್ನೂ ಓದಿ:ಬ್ರಿಟನ್ ಪ್ರಧಾನಿ ಹುದ್ದೆಗೆ ಮಾಜಿ ಪಿಎಂ ಬೋರಿಸ್ ಜಾನ್ಸನ್ ಮರು ಪ್ರವೇಶ.. ರಿಷಿ ಸುನಕ್ ಜೊತೆ ಪೈಪೋಟಿ
ಆಕಾಂಕ್ಷಿಗಳು 100 ಸಂಸದರ ಬೆಂಬಲ ಇರುವುದನ್ನು ಸೋಮವಾರ ಮಧ್ಯಾಹ್ನ 2 ಗಂಟೆಯೊಳಗೆ ಸಾಬೀತುಪಡಿಸಬೇಕು. 357 ಟೋರಿ ಸದಸ್ಯರ ಪೈಕಿ 100 ಸದಸ್ಯರ ಬೆಂಬಲ ಪಡೆದವರು ಪ್ರಧಾನಿ ರೇಸ್‌ನಲ್ಲಿ ಉಳಿಯಲಿದ್ದಾರೆ. ಇಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಆಡಳಿತ ಪಕ್ಷದ ಸದಸ್ಯರು ಆನ್‌ಲೈನ್ ಮತದಾನದ ನಡೆಸಿ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ.