ವಾಷಿಂಗ್ಟನ್: ಅಮೆರಿಕದಲ್ಲಿ ಏರಿಕೆಯಾಗಿರುವ ಇಂಧನ ಬೆಲೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಧ್ಯಕ್ಷ ಜೋ ಬೈಡನ್ ತಮ್ಮ ದೇಶದ ಪೆಟ್ರೋಲಿಯಂ ಮೀಸಲು ಪ್ರದೇಶದಿಂದ ದಿನಕ್ಕೆ 1 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆಯ ಆದೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಗುರುವಾರದೊಳಗೆ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.
ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದಾಗಿ ಪುಟಿನ್ ಸರ್ಕಾರದಿಂದ ತೈಲ ಹಾಗೂ ಅನಿಲ ಆಮದಿಗೆ ಅಮೆರಿಕ, ಮಿತ್ರ ರಾಷ್ಟ್ರಗಳು ನಿರ್ಬಂಧಗಳನ್ನು ವಿಧಿಸಿವೆ. ಇದು ತೈಲ ಬೆಲೆ ಏರಿಕೆಗೆ ಕಾರಣವಾಗಿತ್ತು. ಏರುತ್ತಿರುವ ಅನಿಲ ಬೆಲೆಗಳು, ತಮ್ಮ ಆಡಳಿತದ ಯೋಜನೆಗಳ ಕುರಿತು ಕೇಳಬರುತ್ತಿರುವ ಟೀಕೆಗಳಿಂದಾಗಿ ಬೈಡನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ತೈಲ ಬಿಡುಗಡೆಯ ಅವಧಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಹಲವಾರು ತಿಂಗಳುಗಳವರೆಗೆ ಇರಲಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಹುತೇಕ ತೈಲ ಕಂಪನಿಗಳು ಹೆಚ್ಚು ಉತ್ಪಾದನೆಯನ್ನು ಹೆಚ್ಚಿಸಿಲ್ಲ, ಇದು ಬೈಡನ್‌ಗೆ ಸವಾಲನ್ನು ಸೃಷ್ಟಿಸಿದೆ. ಫೆಬ್ರವರಿಯಲ್ಲಿ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಮತ್ತು ರಷ್ಯಾ ಉಕ್ರೇನ್ ಮೇಲೆ ದಾಳಿ ನಂತರ ಪೆಟ್ರೋಲಿಯಂ, ಗ್ಯಾಸೋಲಿನ್ ಬೆಲೆ ಏರಿಕೆ ಬೈಡನ್ ಅವರ ಜನಪ್ರಿಯತೆಯನ್ನು ಕುಗ್ಗಿಸಿದೆ.