ವಾಷಿಂಗ್ಟನ್ : ತಾವು ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಪುನರಾಯ್ಕೆ ಬಯಸಿರುವುದಾಗಿ ಜೋ ಬೈಡನ್ ಘೋಷಿಸಿದ್ದಾರೆ. ಇವರ ಜೊತೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಕೂಡ ಪುನರಾಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಮುಂದಿನ ವರ್ಷಗಳಲ್ಲಿ ನಮಗೆ ಹೆಚ್ಚು ಸ್ವಾತಂತ್ರ್ಯವಿರಲಿದೆಯೇ ಅಥವಾ ಕಡಿಮೆ ಸ್ವಾತಂತ್ರ್ಯ ಇರಲಿದೆಯೇ, ಹೆಚ್ಚಿನ ಹಕ್ಕು ಸಿಗಲಿವೆಯೇ ಅಥವಾ ಹಕ್ಕುಗಳು ಕಡಿಮೆಯಾಗಲಿವೆಯೇ ಎಂಬುದು ಈಗ ನಾವು ಎದುರಿಸುತ್ತಿರುವ ಪ್ರಶ್ನೆಯಾಗಿದೆ ಎಂದು ಬೈಡನ್ ವಿಡಿಯೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏನು ಉತ್ತರ ನೀಡಬೇಕೆಂಬುದನ್ನು ನನಗೆ ತಿಳಿದಿದೆ. ಇದು ಸಮಾಧಾನಪಡುವ ಸಮಯವಲ್ಲ. ಅದಕ್ಕಾಗಿಯೇ ನಾನು ಮರು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಬೈಡನ್ ಹೇಳಿದ್ದಾರೆ.
80 ರ ಹರೆಯದ ಬೈಡನ್ ಅವರು ಈಗಾಗಲೇ ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವಯಸ್ಸಾದ ಅಧ್ಯಕ್ಷರಾಗಿದ್ದಾರೆ ಮತ್ತು ಅವರ ಎರಡನೇ ಅವಧಿಯ ಕೊನೆಯಲ್ಲಿ ಅವರು 86 ವರ್ಷ ವಯಸ್ಸಿನವರಾಗಲಿದ್ದಾರೆ. ಅಷ್ಟೊಂದು ಹಿರಿಯರಾದ ಅವರು ಮತ್ತೊಮ್ಮೆ ಅಧ್ಯಕ್ಷರಾಗುವುದು ಎಷ್ಟು ಸೂಕ್ತ ಎಮದು ಅವರದೇ ಪಕ್ಷ ಡೆಮಾಕ್ರಟಿಕ್ ಪಕ್ಷದವರೂ ಪ್ರಶ್ನಿಸುತ್ತಿದ್ದಾರೆ. ಆದರೆ ಬೈಡನ್ ಎರಡನೇ ಬಾರಿಗೆ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಮತದಾರರು ಅವರ ಪರವಾಗಿ ರ‍್ಯಾಲಿ ಮಾಡುತ್ತಿದ್ದಾರೆ.
ನವೆಂಬರ್ 2024 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಡೆನ್, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಮರ್ಥವಾಗಿ ಎದುರಿಸಬಹುದು. ಪ್ರೈಮರಿ ಚುನಾವಣೆಗೆ ರಿಪಬ್ಲಿಕನ್ ಲೈನ್-ಅಪ್ ಇನ್ನೂ ರೂಪುಗೊಳ್ಳುತ್ತಿದ್ದರೂ, ಟ್ರಂಪ್ ಅವರು ತಮ್ಮ ಪ್ರತಿಸ್ಪರ್ಧಿಗಳು ಮತ್ತು ಸಂಭಾವ್ಯ ಪ್ರತಿಸ್ಪರ್ಧಿಗಳನ್ನು ವ್ಯಾಪಕ ಅಂತರದಿಂದ ಹಿಮ್ಮೆಟ್ಟಿಸುವ ಮೂಲಕ ನೆಚ್ಚಿನ ಪ್ರತಿಸ್ಪರ್ಧಿಯಾಗಿದ್ದಾರೆ.