ಟೊಮೊಹಾನ್ (ಇಂಡೋನೇಷ್ಯಾ): ಇಂಡೋನೇಷ್ಯಾದ ಸುಲವೆಸಿ ದ್ವೀಪದ ಕುಖ್ಯಾತ ಪ್ರಾಣಿ ಮಾರುಕಟ್ಟೆಯಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಕ್ರೂರವಾಗಿ ಹತ್ಯೆ ಮಾಡುವುದನ್ನು ಇನ್ನು ಮುಂದೆ ನಿಲ್ಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ಘೋಷಿಸಿದ್ದಾರೆ. ಇಲ್ಲಿ ನಡೆಯುವ ಪ್ರಾಣಿಗಳ ಕ್ರೂರ ಹತ್ಯೆಯನ್ನು ತಡೆಗಟ್ಟುವಂತೆ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಕಾರ್ಯಕರ್ತರು ಮತ್ತು ವಿಶ್ವದ ಖ್ಯಾತನಾಮರು ಅಭಿಯಾನ ನಡೆಸಿದ್ದರು.
ಟೊಮೊಹೋನ್ ಎಕ್ಸ್‌ಟ್ರೀಮ್ ಮಾರ್ಕೆಟ್ ಇಂಡೋನೇಷ್ಯಾದಲ್ಲಿ ನಾಯಿ ಮತ್ತು ಬೆಕ್ಕಿನ ಮಾಂಸ ಮುಕ್ತವಾದ ಮೊದಲ ಮಾರುಕಟ್ಟೆಯಾಗಲಿದೆ ಎಂದು ಪ್ರಾಣಿ ಹಿಂಸಾ ವಿರೋಧಿ ಸಂಘಟನೆ ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಷನಲ್ (HSI) ಹೇಳಿದೆ.
ಜೀವಂತವಾಗಿರುವಾಗಲೇ ನಾಯಿ ಮತ್ತು ಬೆಕ್ಕುಗಳಿಗೆ ಹೊಡೆದು ಅವುಗಳಿಗೆ ಬೆಂಕಿ ಹಚ್ಚಿದ ದೃಶ್ಯಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಮುಂದೆ ಈ ಮಾರುಕಟ್ಟೆಯಲ್ಲಿ ವಧೆ ಮತ್ತು ವ್ಯಾಪಾರಕ್ಕೆ ಶಾಶ್ವತ ನಿರ್ಬಂಧ ಹೇರಲಾಗಿದೆ ಎಂದು ಶುಕ್ರವಾರ ಟೊಮೊಹೋನ್ ನಗರದ ಮೇಯರ್ ಕ್ಯಾರೊಲ್ ಸೆಂಡುಕ್ ಘೋಷಿಸಿದರು. ಕಸಾಯಿಖಾನೆ ಪೂರೈಕೆದಾರರ ಬಳಿ ಉಳಿದಿರುವ ಎಲ್ಲ ಜೀವಂತ ನಾಯಿಗಳು ಮತ್ತು ಬೆಕ್ಕುಗಳನ್ನು ರಕ್ಷಿಸಿ ಅಭಯಾರಣ್ಯಗಳಿಗೆ ಬಿಡಲಾಗುವುದು ಎಂದು ಎಚ್‌ಎಸ್‌ಐ ತಿಳಿಸಿದೆ.
ಟೊಮೊಹೋನ್ ಎಕ್ಸ್‌ಟ್ರೀಮ್ ಮಾರುಕಟ್ಟೆಯನ್ನು ಈ ಹಿಂದೆ ಪ್ರವಾಸಿ ಆಕರ್ಷಣೆ ಎಂದು ಹೆಸರಿಸಲಾಗಿತ್ತು. ಟ್ರಿಪ್ ಅಡ್ವೈಸರ್‌ನಲ್ಲಿ ಬೆಕ್ಕಿನ ಮಾಂಸ ಮತ್ತು ಬಾವಲಿಗಳು, ಹಾವುಗಳು ಮತ್ತು ಇತರ ಸರೀಸೃಪಗಳಂತಹ ಕಾಡು ಮತ್ತು ಸಂರಕ್ಷಿತ ಜಾತಿಯ ಪ್ರಾಣಿಗಳ ಮೃತದೇಹಗಳನ್ನು ಮಾರಾಟ ಮಾಡುವ ತಾಣವಾಗಿ ಇದನ್ನು ಪಟ್ಟಿಮಾಡಲಾಗಿದೆ. ಡಾಗ್ ಮೀಟ್ ಫ್ರೀ ಇಂಡೋನೇಷ್ಯಾ ಬ್ಯಾನರ್ ಅಡಿ ಕಾರ್ಯನಿರ್ವಹಿಸುತ್ತಿರುವ HSI ಮತ್ತು ಇಂಡೋನೇಷಿಯನ್ ಸಂಘಟನೆಗಳು ಮಾನವನ ಬಳಕೆಗಾಗಿ ಜೀವಂತ ನಾಯಿಗಳ ವ್ಯಾಪಾರವನ್ನು ಕೊನೆಗೊಳಿಸಲು ಪ್ರಚಾರ ಮಾಡುತ್ತಿವೆ.
ಸಂಘಟನೆಗಳ ನಿರಂತರ ಪ್ರಯತ್ನದ ಫಲ:ಪಂಜರದಲ್ಲಿರುವ ನಾಯಿಗಳನ್ನು ಹೊರಗೆಳೆಯುವುದು ಮತ್ತು ಅವುಗಳ ತಲೆಗಳನ್ನು ಜಜ್ಜಿ ಒಡೆಯುವುದು ಮತ್ತು ಅವು ಇನ್ನೂ ಜೀವಂತವಾಗಿರುವಾಗಲೇ ಅವನ್ನು ಸುಡುವುದು ಇಂಥ ಕ್ರೌರ್ಯದ ದೃಶ್ಯಗಳನ್ನು ಈ ಮಾರುಕಟ್ಟೆಯಲ್ಲಿ ಪ್ರಾಣಿ ದಯಾ ಸಂಘಟನೆ ಕಾರ್ಯಕರ್ತರು 2018 ರಲ್ಲಿ ಚಿತ್ರೀಕರಿಸಿದ್ದರು. ಈ ಮಾಂಸ ಮಾರುಕಟ್ಟೆಗಳಲ್ಲಿ ಪ್ರಾಣಿಗಳ ಹತ್ಯೆ ಮಾಡುವುದನ್ನು ಕ್ರೂರದಲ್ಲಿ ಕ್ರೂರ ಮತ್ತು ನರಕ ಎಂದು ಸಂಘಟನೆಗಳು ಬಿಂಬಿಸಿದ್ದವು.
ಇದರ ನಂತರ ಇಂಡೋನೇಷ್ಯಾ ಸೇರಿದಂತೆ ಮತ್ತು ಪ್ರಪಂಚದಾದ್ಯಂತ ಇಲ್ಲಿನ ಪ್ರಾಣಿಗಳ ಬಗ್ಗೆ ಸಹಾನುಭೂತಿ ಉಂಟಾಗಿತ್ತು. 2018 ರಲ್ಲಿ ಅಂತಾರಾಷ್ಟ್ರೀಯ ನಟರು ಮತ್ತು ಸೆಲೆಬ್ರಿಟಿಗಳು ಈ ಮಾರುಕಟ್ಟೆಗಳನ್ನು ಮುಚ್ಚುವಂತೆ ಅಧ್ಯಕ್ಷ ಜೊಕೊ ವಿಡೋಡೊಗೆ ಮನವಿ ಮಾಡಿದ್ದರು. ನಟಿ ಕ್ಯಾಮರೂನ್ ಡಯಾಜ್, ಟಾಕ್ ಶೋ ಹೋಸ್ಟ್ ಎಲ್ಲೆನ್ ಡಿಜೆನೆರೆಸ್, ಟ್ಯಾಲೆಂಟ್ ಸ್ಪಾಟರ್ ಸೈಮನ್ ಕೋವೆಲ್, ಹಾಸ್ಯನಟ ರಿಕಿ ಗೆರ್ವೈಸ್, ಇಂಡೋನೇಷಿಯಾದ ಪಾಪ್ ಗಾಯಕ ಆಂಗ್ಗುನ್ ಮತ್ತು ಸಂಗೀತಗಾರ ಮೊಬಿ ಸೇರಿದಂತೆ 90 ಕ್ಕೂ ಹೆಚ್ಚು ಪ್ರಸಿದ್ಧ ವ್ಯಕ್ತಿಗಳು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಉತ್ತರ ಸುಲವೆಸಿ ಪ್ರಾಂತ್ಯವು 2.6 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇವರು ಬಹುತೇಕ ಕ್ರಿಶ್ಚಿಯನ್ನರಾಗಿದ್ದಾರೆ. ಪ್ರಾಣಿ ಹಿಂಸೆ ವಿರೋಧಿ ಸಂಘಟನೆಗಳ ಪ್ರಕಾರ ಉತ್ತರ ಸುಲವೇಸಿಯಲ್ಲಿ ವಾರಕ್ಕೊಮ್ಮೆ ಸಾವಿರಾರು ನಾಯಿಗಳು ಮತ್ತು ಬೆಕ್ಕುಗಳನ್ನು ಕೊಲ್ಲಲಾಗುತ್ತದೆ.
ವಿಶ್ವದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಇಂಡೋನೇಷ್ಯಾ. ದೇಶದ 270 ಮಿಲಿಯನ್ ಜನರಲ್ಲಿ ಶೇ 90 ರಷ್ಟು ಜನ ಮುಸ್ಲಿಂ ಇರುವಾಗ ಈ ದೇಶದಲ್ಲಿ ನಾಯಿ ಮಾಂಸ ಆಹಾರವಾಗಿರುವುದು ಸಾಧ್ಯವಿಲ್ಲ. ಮುಸಲ್ಮಾನರು ಹಂದಿ ಮಾಂಸದಂತೆಯೇ ನಾಯಿಯನ್ನು ಸಹ ಹರಾಮ್ ಎಂದು ಪರಿಗಣಿಸುತ್ತಾರೆ. ನಾಯಿ ತಿನ್ನುವುದು ದೂರವೇ ಉಳಿಯಿತು, ಅದನ್ನು ಮುಟ್ಟುವುದು ಕೂಡ ಹರಾಮ್ ಎಂದು ಪರಿಗಣಿಸಲಾಗುತ್ತದೆ.
ಇಲ್ಲಿವೆ ಇನ್ನು ಹಲವು ವಿಶಿಷ್ಠ ಸಮುದಾಯಗಳು:ಆದರೆ ದ್ವೀಪಸಮೂಹದ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಮುಸ್ಲಿಂ ಹೊರತುಪಡಿಸಿ ಇನ್ನೂ ಹಲವಾರು ಸಮುದಾಯದ ಜನ ವಾಸವಾಗಿದ್ದಾರೆ. ಅವರಲ್ಲಿ ಕೆಲವರು ನಾಯಿ ಮಾಂಸವನ್ನು ಸಾಂಪ್ರದಾಯಿಕ ಸವಿಯಾದ ಪದಾರ್ಥವೆಂದು ಪರಿಗಣಿಸುತ್ತಾರೆ ಅಥವಾ ಇದು ಆರೋಗ್ಯ ಗುಣಗಳನ್ನು ಹೊಂದಿದೆ ಎಂದು ನಂಬುತ್ತಾರೆ. ಡಾಗ್ ಮೀಟ್ ಫ್ರೀ ಇಂಡೋನೇಷ್ಯಾ ಸಂಘಟನೆಯ ಪ್ರಕಾರ ಬಹುತೇಕವಾಗಿ ಉತ್ತರ ಸುಲವೆಸಿ, ಉತ್ತರ ಸುಮಾತ್ರಾ ಮತ್ತು ಪೂರ್ವ ನುಸಾ ತೆಂಗರಾ ಪ್ರಾಂತ್ಯಗಳಲ್ಲಿ ಶೇಕಡಾ 7ರಷ್ಟು ಇಂಡೋನೇಷಿಯನ್ನರು ನಾಯಿಯನ್ನು ತಿನ್ನುತ್ತಾರೆ. ಈ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನವರು ಕ್ರಿಶ್ಚಿಯನ್ ಆಗಿದ್ದಾರೆ.
HSI ಪ್ರಕಾರ ಏಷ್ಯಾದ ದೇಶಗಳಾದ ಫಿಲಿಪೈನ್ಸ್, ತೈವಾನ್, ಸಿಂಗಾಪುರ್, ಹಾಂಗ್ ಕಾಂಗ್, ಥೈಲ್ಯಾಂಡ್ ಮತ್ತು ಮಲೇಷ್ಯಾ ಈಗಾಗಲೇ ನಾಯಿ ಮಾಂಸ ವ್ಯಾಪಾರ ಮತ್ತು ನಾಯಿಗಳ ಸೇವನೆಯನ್ನು ನಿಷೇಧಿಸಿವೆ.
ಇದನ್ನೂ ಓದಿ : ಟಿಟಿಪಿ ಉಗ್ರರಿಗೆ ಬೆದರಿದ ಇಸ್ಲಾಮಾಬಾದ್: ಹದಗೆಟ್ಟ ಅಫ್ಘಾನಿಸ್ತಾನ - ಪಾಕಿಸ್ತಾನ ಸಂಬಂಧ!