ಕರ್ನಾಟಕ

karnataka

ಬಲೂಚ್ ಮಹಿಳೆಯರನ್ನು ಎಳೆದಾಡಿದ ಪೊಲೀಸರು.. ಪಾಕ್ ಸರ್ಕಾರದ ಅಮಾನವೀಯ ಕೃತ್ಯ

By

Published : Sep 12, 2022, 12:48 PM IST

ಸರ್ಕಾರದ ವಿರುದ್ಧ ಧ್ವನಿ ಎತ್ತುವ ಬಲೂಚಿಸ್ತಾನ್ ನಾಗರಿಕರನ್ನು ಕಿಡ್ನ್ಯಾಪ್ ಮಾಡಿಸುತ್ತಿರುವ ಪಾಕ್ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಜೋರಾಗುತ್ತಿವೆ. ಕರಾಚಿಯಲ್ಲಿ ನಡೆದ ಬಲೂಚ್ ಮಹಿಳೆಯರ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕ್ ಸರ್ಕಾರ ಅಮಾನವೀಯ ಕ್ರಮಗಳಿಗೆ ಮುಂದಾಗಿದೆ.

ಬಲೂಚ್ ಮಹಿಳೆಯರನ್ನು ಎಳೆದಾಡಿದ ಪೊಲೀಸರು
Baloch women dragged on streets

ಕರಾಚಿ (ಪಾಕಿಸ್ತಾನ) : ನಾಪತ್ತೆಯಾದವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಬಲೂಚ್ ಮಹಿಳೆಯರನ್ನು ಕರಾಚಿಯ ಬೀದಿಗಳಲ್ಲಿ ಪೊಲೀಸರು ಎಳೆದಾಡಿದ ಘಟನೆ ನಡೆದಿದೆ.

ಇದು ಪಾಕಿಸ್ತಾನ ಇಸ್ಲಾಮಿಕ್ ರಿಪಬ್ಲಿಕ್ ಎಂದು ಕರೆಯಲ್ಪಡುವ ದೇಶ. ನಾಪತ್ತೆಯಾದ ವ್ಯಕ್ತಿಗಳ ಬಿಡುಗಡೆಗೆ ಒತ್ತಾಯಿಸಿದ್ದಕ್ಕೆ ಬಲೂಚ್ ಮಹಿಳೆಯರನ್ನು ಕರಾಚಿಯ ಬೀದಿಗಳಲ್ಲಿ ಎಳೆಯಲಾಗುತ್ತಿದೆ. ದುರದೃಷ್ಟವಶಾತ್ ಪಾಕಿಸ್ತಾನವು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಅಶ್ರಫ್ ಬಲೋಚ್ ಟ್ವೀಟ್ ಮಾಡಿದ್ದಾರೆ.

ನಾಗರಿಕ ಸಮಾಜದ ಪ್ರಯತ್ನಗಳ ಹೊರತಾಗಿಯೂ ಪಾಕಿಸ್ತಾನದಲ್ಲಿ ಸರ್ಕಾರಿ ಪ್ರಾಯೋಜಿತ ಬಲವಂತದ ನಾಪತ್ತೆಗಳ ಸಮಸ್ಯೆಗೆ ಅಂತ್ಯವಿಲ್ಲವಾಗಿದೆ. ಒಂದು ದೇಶವಾಗಿ ಪಾಕಿಸ್ತಾನವು ಅದನ್ನು ನಿರ್ದಯದಿಂದ ಬಳಸುವುದನ್ನು ಮುಂದುವರೆಸಿದೆ. ವಿಪರ್ಯಾಸವೆಂದರೆ ಪಾಕಿಸ್ತಾನದಲ್ಲಿ ಅಧಿಕಾರ ಹಿಡಿದ ಸರ್ಕಾರಗಳು ಬಲವಂತದ ನಾಪತ್ತೆಗಳ ಅಭ್ಯಾಸವನ್ನು ಕೊನೆಗೊಳಿಸಲು ಪ್ರತಿಜ್ಞೆ ಮಾಡುತ್ತಲೇ ಬಂದಿವೆ. ಆದಾಗ್ಯೂ, ಇದಕ್ಕೆ ಅಂತ್ಯವಿಲ್ಲ ಎಂದು ಕೆನಡಾ ಮೂಲದ ಥಿಂಕ್ ಟ್ಯಾಂಕ್, ಇಂಟರ್ನ್ಯಾಷನಲ್ ಫೋರಮ್ ಫಾರ್ ರೈಟ್ಸ್ ಅಂಡ್ ಸೆಕ್ಯುರಿಟಿ (International Forum for Rights and Security -IFFRAS) ವರದಿ ಮಾಡಿದೆ.

ವಿರೋಧದ ಧ್ವನಿಯನ್ನು ಹತ್ತಿಕ್ಕಲು ಬಲವಂತದ ನಾಪತ್ತೆ ಕ್ರಮವನ್ನು ಪಾಕಿಸ್ತಾನ ಸರ್ಕಾರ ಅಳವಡಿಸಿಕೊಂಡಿದೆ. ತನ್ನ ಸೇನೆಯ ವಿರುದ್ಧ ಮಾತನಾಡುವವರ ವಿರುದ್ಧ ಅಥವಾ ವೈಯಕ್ತಿಕ-ಸಾಮಾಜಿಕ ಹಕ್ಕುಗಳ ಪರವಾಗಿ ಧ್ವನಿ ಎತ್ತುವವರ ವಿರುದ್ಧ ಪಾಕಿಸ್ತಾನ ಇದನ್ನೊಂದು ಅಸ್ತ್ರವಾಗಿ ಬಳಸುತ್ತಿದೆ. ಇಂಥ ನಾಪತ್ತೆಗಳನ್ನು ತಡೆಗಟ್ಟುವ ಸಲುವಾಗಿ ಅಧಿಕಾರದಲ್ಲಿರುವ ಸರ್ಕಾರದ ಮೇಲೆ ನಿಯಂತ್ರಣಗಳನ್ನು ವಿಧಿಸುವಂತೆ ಬಲವಂತದ ನಾಪತ್ತೆಗಳ ಅಂತರರಾಷ್ಟ್ರೀಯ ದಿನದಂದು (Day of the Enforced Disappearances) (ಆಗಸ್ಟ್ 30) ಮಾಜಿ ಶಾಸಕರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆಗ್ರಹಿಸಿದ್ದರು.

ಅಂದಾಜು 5,000 ರಿಂದ 8,000 ಜನರ 'ನಾಪತ್ತೆ'ಗೆ ಪಾಕಿಸ್ತಾನದ ಸಶಸ್ತ್ರ ಪಡೆಗಳೇ ಕಾರಣವೆಂದು ಆರೋಪಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಲೂಚಿಸ್ತಾನದ ಕಾರ್ಯಕರ್ತರು 'ಕಾಣೆಯಾದವರ' ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು IFFRAS ವರದಿ ಮಾಡಿದೆ. ಬಲೂಚ್ ರಾಷ್ಟ್ರೀಯವಾದಿಗಳು ಅನೇಕ ಗುಂಪುಗಳನ್ನು ರಚಿಸಿಕೊಂಡು, ನಾಗರಿಕ ಹಕ್ಕುಗಳ ಮೇಲಿನ ನಿರ್ಬಂಧಗಳನ್ನು ವಿರೋಧಿಸಲು ಮತ್ತು ಸಿಪಿಇಸಿ ಯೋಜನೆಗಳನ್ನು ವಿರೋಧಿಸಲು ದೇಶದ ವಿರುದ್ಧ ಹೋರಾಡುತ್ತಿದ್ದಾರೆ. ಬಲೂಚಿಸ್ತಾನ್ ಮತ್ತು ಖೈಬರ್-ಪಖ್ತುನಖ್ವಾ ಪ್ರಾಂತ್ಯಗಳಲ್ಲಿ ಬಲವಂತದ ನಾಪತ್ತೆ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ.

ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ಪಾಕ್‌ ಸೇನೆ ಗುರಿಯಾಗಿಸಿ ದಾಳಿ; ನಾಲ್ವರು ದಾಳಿಕೋರರ ಹತ್ಯೆ

ABOUT THE AUTHOR

...view details