ಹೈದರಾಬಾದ್:ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ವೇದಿಕೆಯ ನಾಯಕರ ಸಭೆ 2023 ರ ನವೆಂಬರ್ 17 ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಕ್ತಾಯಗೊಂಡಿತು. ಈ ಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಎಪಿಇಸಿ (ಅಪೆಕ್) ಸದಸ್ಯತ್ವ ಸಿಗುವ ವಿಷಯ ನೀತಿ ನಿರೂಪಕರ ವಲಯದಲ್ಲಿ ಮತ್ತು ಹಣಕಾಸು ಪತ್ರಿಕೆಗಳಲ್ಲಿ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಅಪೆಕ್ನ ಕಾರ್ಯತಂತ್ರದ ಪ್ರಾಮುಖ್ಯತೆ ಕಾರಣದಿಂದ ಭಾರತಕ್ಕೆ ಇದರ ಸದಸ್ಯತ್ವ ಮಹತ್ವ ಪಡೆದುಕೊಂಡಿದೆ.
ಅಪೆಕ್ ಇದು 1989 ರಲ್ಲಿ ರೂಪುಗೊಂಡ ಪ್ರಾದೇಶಿಕ ಆರ್ಥಿಕ ವೇದಿಕೆಯಾಗಿದೆ. ಪ್ರಸ್ತುತ ಇದು 21 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದ್ದು, ಇದು ವಿಶ್ವ ವ್ಯಾಪಾರದ ಅರ್ಧದಷ್ಟು ಮತ್ತು ವಿಶ್ವದ ಜಿಡಿಪಿಯ 62 ಪ್ರತಿಶತ ಹೊಂದಿದೆ. ಅಲ್ಲದೇ ಇದರ ಸದಸ್ಯ ರಾಷ್ಟ್ರಗಳು 2.9 ಬಿಲಿಯನ್ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ.
ಆಸ್ಟ್ರೇಲಿಯಾ, ಬ್ರೂನಿ, ಕೆನಡಾ, ಚೀನಾ, ಹಾಂಕಾಂಗ್, ಚಿಲಿ, ನ್ಯೂಜಿಲೆಂಡ್, ಪಪುವಾ ನ್ಯೂ ಗಿನಿಯಾ, ಫಿಲಿಪೈನ್ಸ್, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ರಷ್ಯಾ, ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ, ಪೆರು, ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್ ಮತ್ತು ತೈವಾನ್ ಮತ್ತು ವಿಯೆಟ್ನಾಂ ಅಪೆಕ್ನ ಸದಸ್ಯ ರಾಷ್ಟ್ರಗಳಾಗಿವೆ.
ಅಪೆಕ್ ಗುಂಪಿನ ಸದಸ್ಯ ರಾಷ್ಟ್ರಗಳು ಸ್ವಯಂಪ್ರೇರಿತ ಆಧಾರದ ಮೇಲೆ ಕೈಗೊಳ್ಳುವ ಒಮ್ಮತ ಮತ್ತು ಬದ್ಧತೆಗಳ ಮೂಲಕ ತೆಗೆದುಕೊಳ್ಳುವ ಸಾಮೂಹಿಕ ನಿರ್ಧಾರಗಳ ಆಧಾರದ ಮೇಲೆ ವೇದಿಕೆ ಕಾರ್ಯನಿರ್ವಹಿಸುತ್ತದೆ. ಇತರ ಅನೇಕ ಬಹು ದೇಶಗಳ ಒಕ್ಕೂಟಗಳಿಗಿಂತ ಭಿನ್ನವಾಗಿ ಈ ವೇದಿಕೆಯ ನಿರ್ಧಾರಗಳು ಸದಸ್ಯ ರಾಷ್ಟ್ರಗಳಿಗೆ ಕಡ್ಡಾಯವಲ್ಲ. ಪ್ರಾದೇಶಿಕ ಆರ್ಥಿಕ ಏಕೀಕರಣದ ಮೂಲಕ ಏಷ್ಯಾ - ಪೆಸಿಫಿಕ್ ಪ್ರದೇಶದ ಹೆಚ್ಚುತ್ತಿರುವ ಪರಸ್ಪರ ಅವಲಂಬನೆ ಬೆಸೆಯುವ ಮತ್ತು ಈ ಪ್ರದೇಶದ ಜನರಿಗೆ ಸಮೃದ್ಧಿ ಸೃಷ್ಟಿಸುವ ಉದ್ದೇಶದಿಂದ ಅಪೆಕ್ ಕಾರ್ಯನಿರ್ವಹಿಸುತ್ತದೆ.
ಅಪೆಕ್ ರಚನೆಯಾದಾಗಿನಿಂದ ಅದು ವ್ಯಾಪಾರ ವಹಿವಾಟಿನ ಮೇಲಿನ ಸುಂಕ ಕಡಿಮೆ ಮಾಡುವುದು, ಮುಕ್ತ ವ್ಯಾಪಾರ ಉತ್ತೇಜಿಸುವುದು ಮತ್ತು ಆರ್ಥಿಕ ಉದಾರೀಕರಣಕ್ಕಾಗಿ ಕೆಲಸ ಮಾಡುತ್ತಿದೆ. ಈ ನೀತಿಗಳು ಹೆಚ್ಚಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ.
ಭಾರತಕ್ಕೆ ಈವರೆಗೂ ಅಪೆಕ್ ಸದಸ್ಯತ್ವ ಸಿಗದಿರುವುದಕ್ಕೆ ಕಾರಣವೇನು? : ಅಪೆಕ್ ಗುಂಪಿನ ಭಾಗವಾಗಲು 1991 ರಲ್ಲಿ ಭಾರತ ಮಾಡಿದ ಮನವಿಯು ಕೆಲ ಸದಸ್ಯ ರಾಷ್ಟ್ರಗಳ ಆಕ್ಷೇಪಣೆಗಳಿಂದಾಗಿ ಸ್ವೀಕೃತವಾಗಲಿಲ್ಲ. ನಂತರ 1997 ರಲ್ಲಿ ಅಪೆಕ್ ಹೊಸ ಸದಸ್ಯತ್ವ ನೀಡುವುದನ್ನು ನಿಲ್ಲಿಸಿತ್ತು ಹಾಗೂ ಈ ನಿರ್ಬಂಧ 2012 ರವರೆಗೆ ಜಾರಿಯಲ್ಲಿತ್ತು. ಹೀಗಾಗಿ ಈ ಅವಧಿಯಲ್ಲಿ ಕೂಡ ಭಾರತ ಅಪೆಕ್ ಸದಸ್ಯತ್ವ ಪಡೆಯುವುದು ಸಾಧ್ಯವಾಗಲಿಲ್ಲ. ಇದಲ್ಲದೇ ಅಪೆಕ್ನಲ್ಲಿ ದೇಶಗಳು ಪ್ರಮುಖವಾಗಿ 'ಪೆಸಿಫಿಕ್' ವಲಯದ ದೇಶಗಳಾಗಿವೆ. ಆದರೆ, ಭಾರತವು ಪೆಸಿಫಿಕ್ ಕರಾವಳಿ ರೇಖೆಯನ್ನು ಹೊಂದಿಲ್ಲ. ಭಾರತದ ಈ ಹೆಚ್ಚುವರಿ ಪ್ರಾದೇಶಿಕ ಸ್ಥಾನಮಾನ ಕೂಡ ದೇಶವು ಅಪೆಕ್ ಸದಸ್ಯತ್ವ ಪಡೆಯದಿರುವುದಕ್ಕೆ ಒಂದು ಕಾರಣವಾಗಿದೆ.
ಅಪೆಕ್ನಲ್ಲಿ ಭಾರತವನ್ನು ಸೇರಿಸದಿರಲು ಮೂರನೇ ಕಾರಣ ಎಂದರೆ ಅದರ ಸೇರ್ಪಡೆಯು ಏಷ್ಯಾ - ಪೆಸಿಫಿಕ್ ಪ್ರಾತಿನಿಧ್ಯದಲ್ಲಿ ಅಸಮತೋಲನ ತರಬಹುದು ಎಂಬ ಕೆಲ ಸದಸ್ಯ ರಾಷ್ಟ್ರಗಳ ಭಯ. ಈಗಾಗಲೇ ಅಪೆಕ್ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಇತರ ಆರು ಆಸಿಯಾನ್ ರಾಷ್ಟ್ರಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ. ಒಂದು ವೇಳೆ, ಭಾರತವನ್ನು ಸೇರಿಸಿಕೊಂಡಲ್ಲಿ ಅಪೆಕ್ನ ನಿರ್ಧಾರಗಳು ಹೆಚ್ಚಾಗಿ ಏಷ್ಯಾ ಪ್ರದೇಶದ ಪರವಾಗಿ ಹೋಗಬಹುದು ಎಂಬುದು ಈಗಿರುವ ರಾಷ್ಟ್ರಗಳ ಆತಂಕವಾಗಿದೆ.
ಸದ್ಯ 2012ರಿಂದ ಅಪೆಕ್ಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ಏತನ್ಮಧ್ಯೆ ಗುಂಪಿಗೆ ತನ್ನನ್ನು ಸೇರಿಸಿಕೊಳ್ಳಬೇಕು ಎಂದು ಭಾರತ ತೀವ್ರ ಒತ್ತಡ ಹೇರುತ್ತಿರುವುದು ಸತ್ಯ. ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣದ ನೀತಿಗಳಿಂದ ಭಾರತ ಸಾಧಿಸಿರುವ ಅದ್ಭುತ ಬೆಳವಣಿಗೆಯ ಕಾರಣದಿಂದ ಭಾರತವನ್ನು ಅಪೆಕ್ಗೆ ಸೇರಿಸಿಕೊಳ್ಳಬೇಕು ಎಂದು ಈ ಗುಂಪಿನ ಅನೇಕ ಸದಸ್ಯ ರಾಷ್ಟ್ರಗಳು ಬೆಂಬಲಕ್ಕೆ ಬರುತ್ತಿವೆ.