ಮಾಸ್ಕೋ(ರಷ್ಯಾ):ವ್ಯಾಗ್ನರ್ ದಂಗೆಯನ್ನು ಶಮನಗೊಳಿಸಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ರಷ್ಯಾದಲ್ಲಿ "ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ" ಯಾವುದೇ ಪ್ರಯತ್ನ ವಿಫಲಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ಪಶ್ಚಿಮ ಮತ್ತು ಕೀವ್ "ಪ್ರತಿಯೊಬ್ಬರನ್ನು ಕೊಲ್ಲಲು ಬಯಸುತ್ತಾರೆ" ಎಂದು ಆರೋಪಿಸಿದ್ದಾರೆ.
ಶನಿವಾರ 20ಕ್ಕೂ ಹೆಚ್ಚು ಗಂಟೆಗಳ ಶಸ್ತ್ರಸಜ್ಜಿತ ಸೈನಿಕರ ದಂಗೆ ನಡೆದಿತ್ತು. ಸೋಮವಾರ ರಾಷ್ಟ್ರವನ್ನುದ್ದೇಶಿಸಿ ದೂರದರ್ಶನದ ಭಾಷಣ ಮಾಡಿದ ಪುಟಿನ್, " ಘಟನೆಗಳು ಪ್ರಾರಂಭವಾದಾಗಿನಿಂದ, ದೊಡ್ಡ ಪ್ರಮಾಣದ ರಕ್ತಪಾತವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಹೇಳಿದರು. ಅಲ್ಲದೇ ಈ ದಂಗೆಯ ಕರಾಳತೆಯನ್ನು ಸಹಿಸಿಕೊಂಡಿದ್ದಕ್ಕಾಗಿ ಮತ್ತು ದಂಗೆ ಹತ್ತಿಕ್ಕಲು ಸಹಕರಿಸಿದ್ದಕ್ಕಾಗಿ ಹಾಗೂ ನಿಮ್ಮ ಬೆಂಬಲಕ್ಕಾಗಿ ರಷ್ಯನ್ನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
"ರಷ್ಯಾದ ಶತ್ರುಗಳು ನಿಖರವಾಗಿ ಈ ಸಹೋದರರ ಹತ್ಯೆಯನ್ನು ಬಯಸಿದ್ದರು. ಕೀವ್ನಲ್ಲಿರುವ ನವ - ನಾಜಿಗಳು ಮತ್ತು ಅವರ ಪಾಶ್ಚಿಮಾತ್ಯ ಪೋಷಕರು ರಾಷ್ಟ್ರೀಯ ದ್ರೋಹಿಗಳು. ಅವರು ರಷ್ಯಾದ ಒಬ್ಬೊಬ್ಬ ಸೈನಿಕರನ್ನು ಕೊಲ್ಲಬೇಕು ಎಂದು ಬಯಸಿದ್ದರು ಎಂದು ಪುಟಿನ್ ಆರೋಪಿಸಿದ್ದಾರೆ. ಆದರೆ ಅದಕ್ಕೆ ನಾವು ಅವಕಾಶ ನೀಡಿಲ್ಲ. ನನ್ನ ಆದೇಶದ ಮೇರೆಗೆ ದೊಡ್ಡ ಪ್ರಮಾಣದ ರಕ್ತಪಾತ ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಷ್ಯಾ ದೇಶದ ಪ್ರಜೆಗಳಿಗೆ ತಾವು ಕೈಗೊಂಡ ಕ್ರಮಗಳ ಬಗ್ಗೆ ಪುಟಿನ್ ವಿವರಣೆ ಕೊಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿವೆ.
ಇದನ್ನೂ ಓದಿ: Russian Wagner group: ಖಾಸಗಿ ಸೇನೆಯ ಬಂಡಾಯವನ್ನು ದ್ರೋಹ ಎಂದ ರಷ್ಯಾದ ಅಧ್ಯಕ್ಷ.. ದಂಗೆ ಹತ್ತಿಕ್ಕಲು ಪುಟಿನ್ ಪ್ರತಿಜ್ಞೆ
ರಷ್ಯಾದ ಅಧ್ಯಕ್ಷರು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ. ವ್ಯಾಗ್ನರ್ ಹೋರಾಟಗಾರರು ಬಯಸಿದಲ್ಲಿ ಬೆಲಾರಸ್‌ಗೆ ತೆರಳಲು ಅನುಮತಿ ನೀಡುತ್ತಾರೆ ಅಥವಾ ರಕ್ಷಣಾ ಸಚಿವಾಲಯ ಅಥವಾ ಇತರ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಪ್ರವೇಶಿಸುವ ಮೂಲಕ ರಷ್ಯಾದ ಸೇವೆಯನ್ನು ಮುಂದುವರಿಸುತ್ತಾರೆ ಎಂದು ಪುಟಿನ್ ಹೇಳಿದ್ದಾರೆ ಎಂದು ವರದಿಯಾಗಿದೆ. ವ್ಯಾಗ್ನರ್ ಗುಂಪಿನ ನಾಯಕ ಯೆವ್ಗೆನಿ ಪ್ರಿಗೊಜಿನ್ ಮತ್ತು ಮಾಸ್ಕೋ ನಡುವೆ ಮಧ್ಯವರ್ತಿಯಾಗಿ ಮಾತುಕತೆ ನಡೆಸಿದ್ದಕ್ಕಾಗಿ ಪುಟಿನ್ ಅವರು ಬೆಲರೂಸಿಯನ್ ಕೌಂಟರ್ಪಾರ್ಟ್ ಅಲೆಕ್ಸಾಂಡರ್ ಲುಕಾಶೆಂಕೊಗೆ ಧನ್ಯವಾದ ಸಮರ್ಪಿಸಿದ್ದಾರೆ.
ವ್ಯಾಗ್ನರ್ ಬಂಡಾಯ ಎದ್ದಿದ್ದೇಕೆ?ಈ ಮಧ್ಯೆ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಮಾಸ್ಕೋದಲ್ಲಿ ತನ್ನ ಬಂಡಾಯ ಎದ್ದಿದ್ದರ ಬಗ್ಗೆ ಮಾತನಾಡಿದ್ದಾರೆ. ತಮ್ಮ ಖಾಸಗಿ ಸೇನೆಯ ನಾಶವನ್ನು ತಡೆಯುವುದಕ್ಕಾಗಿ ಈ ಬಂಡಾಯ ಅನಿವಾರ್ಯವಾಗಿತ್ತು ಎಂದು ಅವರಿ ಹೇಳಿದ್ದಾರೆ. ಸೋಮವಾರ ಬಿಡುಗಡೆ ಮಾಡಿದ ಆಡಿಯೋ ಸಂದೇಶದಲ್ಲಿ ಖಾಸಗಿ ಸೇನಾ ಬಂಡಾಯ ಎದ್ದಿದ್ದು ನಿಜ. ನಮಗೆ ಆದ ಅನ್ಯಾಯದ ಕಾರಣದಿಂದ ಹೋರಾಟ ಅನಿವಾರ್ಯವಾಗಿತ್ತು. ಆದರೆ ಈ ಬಂಡಾಯ ರಷ್ಯಾದದಲ್ಲಿನ ಆಡಳಿತವನ್ನು ಅಧಿಕಾರವನ್ನು ಉರುಳಿಸುವ ಉದ್ದೇಶ ಹೊಂದಿಲ್ಲ ಎಂದು ಪ್ರಿಗೊಜಿನ್ ಸ್ಪಷ್ಟಪಡಿಸಿದ್ದಾರೆ.
ಏನಿದು ವ್ಯಾಗ್ನರ್ ಗುಂಪು:ವ್ಯಾಗ್ನರ್ ಗುಂಪನ್ನು ಅಧಿಕೃತವಾಗಿ ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯುತ್ತಾರೆ. ಇದು ರಷ್ಯಾದ ಖಾಸಗಿ ಅರೆಕಾಲಿಕ ಪಡೆಯಾಗಿದೆ. ಇದೊಂದು ಕಾನೂನು ಬದ್ಧವಲ್ಲದ ಪಡೆಯಾಗಿದೆ. ಆದರೂ ರಷ್ಯಾ ಅಧ್ಯಕ್ಷ ಪುಟಿನ್ಗೆ ಅತ್ಯಾಪ್ತವಾಗಿದೆ. ವ್ಯಾಗ್ನರ್ ಗುಂಪು, ಪುಟಿನ್ ಆದೇಶವನ್ನು ಪಾಲಿಸುವ ಖಾಸಗಿ ಸೇನಾಪಡೆ ಆಗಿದೆ. ಈ ಪಡೆಯೇ ಈಗ ರಷ್ಯಾ ಸೇನೆ ವಿರುದ್ಧ ಬಂಡೆದ್ದಿತ್ತು. ಆದರೆ ಬಂಡಾಯವನ್ನು ಸದ್ಯಕ್ಕೆ ತಡೆಯುವಲ್ಲಿ ಪುಟಿನ್ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:Wagner chief Prigozhin: ವ್ಯಾಗ್ನರ್ ಮುಖ್ಯಸ್ಥನ ಜೊತೆ ಬೆಲಾರಸ್ ಮಾತುಕತೆ, ಬಂಡಾಯ ಶಮನ; ಕ್ರಮ ಕೈಬಿಟ್ಟ ರಷ್ಯಾ