ಮಾಸ್ಕೋ:ಕಳೆದ ಕೆಲ ತಿಂಗಳಿಂದ ಮಹಾಮಾರಿ ಕೊರೊನಾ ವೈರಸ್ಗೆ ಪ್ರಪಂಚದ ಜನರು ರೋಸಿ ಹೋಗಿದ್ದು, ಇಲ್ಲಿಯವರೆಗೆ ಯಾವುದೇ ದೇಶ ಇದಕ್ಕೆ ಲಸಿಕೆ ಕಂಡು ಹಿಡಿದಿಲ್ಲ. ಆದರೆ ಇದೀಗ ರಷ್ಯಾ ವಿಶ್ವದ ನೂರಾರು ಕೋಟಿ ಜನರಲ್ಲಿ ಇದರ ಭರವಸೆ ಮೂಡಿಸಿದೆ.
ಪ್ರಪಂಚದಲ್ಲೇ ಮೊದಲ ದೇಶವಾಗಿ ರಷ್ಯಾ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿದಿದ್ದು, ಈಗಾಗಲೇ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ. ಹೀಗಾಗಿ ಆಗಸ್ಟ್ 10 ರಿಂದ 12ರೊಳಗೆ ಲಸಿಕೆಯ ನೋಂದಣಿ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಿದೆ. ಇದಾದ ಬಳಿಕ ಅಕ್ಟೋಬರ್ ತಿಂಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಸಾಮೂಹಿಕವಾಗಿ ಲಸಿಕೆ ಉತ್ಪಾದನೆ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ತಿಳಿಸಿರುವ ಪ್ರಕಾರ, ಆರಂಭದಲ್ಲಿ ಸ್ವಯಂ ಸೇವಕರು ಸೇರಿದಂತೆ 10 ಸಾವಿರ ಜನರಿಗೆ ಈ ಲಸಿಕೆ ನೀಡಿ ಅಂತಿಮ ಹಂತದ ಅಧ್ಯಯನ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಗಮಾಲೇಯ ನ್ಯಾಷನಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಲಸಿಕೆ ಇದಾಗಿದ್ದು, ಸಾಮೂಹಿಕವಾಗಿ ಅಕ್ಟೋಬರ್ ತಿಂಗಳಲ್ಲಿ ವ್ಯಾಕ್ಸಿನೇಷನ್ ಅಭಿವೃದ್ಧಿಪಡಿಸಲಿದೆ.
ಕಳೆದ ಎರಡು ತಿಂಗಳ ಹಿಂದೆ ಮೊದಲ ಬಾರಿಗೆ ಮಾನವ ಪರೀಕ್ಷೆ ನಡೆಸಿದ್ದ ರಷ್ಯಾ ಅದರಲ್ಲಿ ಸಕ್ಸಸ್ ಆಗಿತ್ತು. ಈಗಾಗಲೇ ಕೆಲ ಸ್ವಯಂಸೇವಕರ ಮೇಲೆ ಲಸಿಕೆಯ ಪ್ರಯೋಗ ನಡೆಸಲಾಗಿದ್ದು, ರೋಗನಿರೋಧಕ ಶಕ್ತಿ ಸ್ಪಷ್ಟವಾಗಿದೆ. ಸ್ವಯಂಸೇವಕರ ಚಟುವಟಿಕೆಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ಅಥವಾ ಅಸಹಜತೆಗಳಿಲ್ಲ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.