ಜೆರುಸಲೆಮ್:ಗಾಜಾದ ಪ್ಯಾಲೆಸ್ತೀನಿಯನ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ 30 ವರ್ಷದ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ಮೃತ ಮಹಿಳೆ. ಈಕೆ ದಕ್ಷಿಣ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು. ಗಾಜಾ ಪಟ್ಟಿಯ ಗಡಿ ಪ್ರದೇಶವಾದ ಅಶ್ಕೆಲೋನ್ ಮೇಲೆ ಪ್ಯಾಲೆಸ್ತೀನಿಯನ್ ಬಂಡುಕೋರರು ನಡೆಸಿದ ದಾಳಿಯಿಂದ ಭಾರೀ ಬೆಂಕಿ ಅವಘಡ ಸಂಭವಿಸಿದೆ.
ಗಾಜಾ ಮೂಲದ ಬಂಡುಕೋರರು ಸೋಮವಾರ ಸಂಜೆಯಿಂದ ಇಸ್ರೇಲ್ ಮೇಲೆ ಸತತ ರಾಕೆಟ್ ದಾಳಿ ನಡೆಸಿದ್ದು, ಮಂಗಳವಾರ ರಾತ್ರಿ 9 ಗಂಟೆಯ ಹೊತ್ತಿಗೆ (ಸ್ಥಳೀಯ ಕಾಲಮಾನ) ನಡೆದ ಹಿಂಸಾಚಾರದಲ್ಲಿ 35 ಜನರು ಮೃತಪಟ್ಟಿದ್ದಾರೆ. ಕರಾವಳಿ ಪ್ರದೇಶದಲ್ಲಿ ಹಮಾಸ್ ಬಂಡುಕೋರರು ಮತ್ತು ಇಸ್ಲಾಮಿಕ್ ಜಿಹಾದಿಗಳನ್ನು ಗುರಿಯಾಗಿಸಿ ಇಸ್ರೇಲ್ ಹಲವು ಬಾರಿ ವಾಯುದಾಳಿ ನಡೆಸಿದೆ.
ಇದನ್ನೂಓದಿ: ಗಾಜಾ ಘರ್ಷಣೆ: ರಾಕೆಟ್ ದಾಳಿಗೆ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ಸಾವು!
ಮೃತ ಭಾರತೀಯ ಮಹಿಳೆ ಕಳೆದ ಏಳು ವರ್ಷಗಳಿಂದ ಗಂಡನೊಂದಿಗೆ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈಕೆಗೆ ಒಂಬತ್ತು ವರ್ಷದ ಮಗನಿದ್ದಾನೆ. ಮನೆಯ ಮೇಲೆ ನಡೆದ ನೇರ ದಾಳಿಯಿಂದ ಸೌಮ್ಯ ಸಂತೋಷ್ ಮೃತಪಟ್ಟರೆ, ಆಕೆ ಆರೈಕೆ ಮಾಡುತ್ತಿದ್ದ 80 ವರ್ಷದ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.