ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭೇಟಿಯಾದಾಗ ಅವರೊಂದಿಗೆ ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದರ ಸ್ವಲ್ಪ ಹೊತ್ತಿನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರೊಂದಿಗೂ ಇಸ್ರೇಲ್ ಪ್ರಧಾನಿ ಚರ್ಚೆ ನಡೆಸಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ:ರಷ್ಯಾ ಪಡೆಗಳಿಂದ ಮತ್ತೊಂದು ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಯತ್ನ
ಕಳೆದ ವಾರ ಎರಡೂ ರಾಷ್ಟ್ರಗಳ ಅಧ್ಯಕ್ಷರ ಜತೆಗೆ ಎರಡು ಸುತ್ತಿನ ಮಾತುಕತೆಯನ್ನು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ನಡೆಸಿದ್ದರು. ಇದೀಗ ಯುದ್ಧದ ಕಾರಣ ಮತ್ತಷ್ಟು ಸಾವು-ನೋವು ಹಾಗೂ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತೊಮ್ಮೆ ಉಭಯ ನಾಯಕರೊಂದಿಗೂ ನಫ್ತಾಲಿ ಬೆನೆಟ್ ಚರ್ಚೆ ನಡೆಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಉಭಯ ರಾಷ್ಟ್ರಗಳೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಇಸ್ರೇಲ್ ಒಂದಾಗಿದೆ. ಪುಟಿನ್ ಅವರನ್ನು ಭೇಟಿಯಾದ ನಂತರ ಬೆನೆಟ್ ಮಾಸ್ಕೋದಿಂದ ಬರ್ಲಿನ್‌ಗೆ ತೆರಳಿದರು. ಅಲ್ಲಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನೂ ಇಸ್ರೇಲ್ ಪ್ರಧಾನಿ ಭೇಟಿ ಮಾಡಿದ್ದಾರೆ.